ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗ ಪೊಲೀಸರ ವಶದಲ್ಲಿರುವಾಗಲೇ ಮೃತಪಟ್ಟ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಅಮೆರಿದಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದಾಗ ಮೃತಪಟ್ಟ ‘ಜಾರ್ಜ್ ಫ್ಲಾಯ್ಡ್’ ಪ್ರಕರಣಕ್ಕೆ ಸಮೀಕರಿಸಲಾಗುತ್ತಿದೆ.
ಅಮೆರಿಕದಲ್ಲಿ ಸಂಭವಿಸಿದ ಜಾರ್ಜ್ ಫ್ಲಾಯ್ಡ್ ಸಾವು ಜನಾಂಗೀಯ ದ್ವೇಷದ ವಿರುದ್ಧದ ಹೋರಾಟವಾಗಿ ರೂಪುಗೊಂಡಿದೆ.
ಕಳೆದ ಶುಕ್ರವಾರ ತಮಿಳುನಾಡಿನ ತೂತುಕುಡಿಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ, ಅವಧಿ ಮೀರಿ ಮೊಬೈಲ್ ಅಂಗಡಿಯನ್ನು ತೆರೆದಿದ್ದ ಕಾರಣಕ್ಕೆ ಪಿ. ಜಯರಾಜ್ ಮತ್ತು ಅವರ ಪುತ್ರ ಫೆನಿಕ್ಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪೊಲೀಸರು ಅವರಿಬ್ಬರನ್ನೂ ನಾಲ್ಕು ದಿನ ತಮ್ಮ ವಶದಲ್ಲೇ ಇರಿಸಿಕೊಂಡಿದ್ದರು ಎನ್ನಲಾಗಿದ್ದು, ನಂತರ ಜೂನ್ 23ರಂದು ಅವರನ್ನು ಕೋವಿಲ್ ಪಟ್ಟಿಯ ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರೂ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ‘ಸಾಥಂಕುಲಂ ಪೊಲೀಸರು ಇಬ್ಬರ ಮೇಲೂ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮೃತಪಟ್ಟಿದ್ದಾರೆ,’ ಎಂದು ಜಯರಾಜ್ ಮತ್ತು ಫೆನಿಕ್ಸ್ ಕುಟುಂಬಸ್ಥರು, ಸಂಬಂಧಿಗಳು ಆರೋಪರಿಸಿದ್ದಾರೆ.
ಈ ಘಟನೆ ತಮಿಳುನಾಡನ್ನು ಕೋಲಾಹಲಕ್ಕೆ ದೂಡಿದೆ. ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ನಾಲ್ವರು ಪೊಲೀಸರನ್ನು ಗೃಹ ಇಲಾಖೆಯು ಅಮಾನತುಗೊಳಿಸಿದೆ. ಆದರೆ, ಸಬ್ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಅವರ ಮನವಿಗೆ ಕಿವಿಗೊಡುವವರೆಗೂ ಶವಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಇದಿಷ್ಟೇ ಅಲ್ಲ, ಪ್ರಕರಣವು ಇಡೀ ದೇಶದ ಗಮನ ಸೆಳೆದಿದೆ. #JusticeforJayarajAndFenix, (ಜಸ್ಟೀಸ್ ಫಾರ್ ಜಯರಾಜ್ ಆ್ಯಂಡ್ ಫೆನಿಕ್ಸ್) #GeorgeFloydsofIndia (ಜಾರ್ಜ್ ಫ್ಲಾಯ್ಡ್ಸ್ ಆಫ್ ಇಂಡಿಯಾ) ಎಂಬ ಎರಡು ವಿಷಯಗಳು ಟ್ವಿಟರ್‌ನಲ್ಲಿ ಶುಕ್ರವಾರದಿಂದ ಟ್ರೆಂಡಿಂಗ್ ಆಗುತ್ತಿವೆ. ಪೊಲೀಸರ ಕ್ರೌರ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕದಲ್ಲಿ ಪೋಲಿಸ್ ದೌರ್ಜನ್ಯಕ್ಕೆ ಪ್ರಾಣ ತೆತ್ತ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಪ್ರಕರಣಕ್ಕೆ ತಮಿಳುನಾಡಿನ ಈ ಪ್ರಕರಣವನ್ನು ಸಮೀಕರಿಸಲಾಗುತ್ತಿದೆ. ಅಮೆರಿದಲ್ಲಿ ಸಂಭವಿಸಿದ ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣವು ಅಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಎಂಬ ಚಳವಳಿಗೆ ಕಾರಣವಾಗಿದೆ.
ದೇಶದ ಹಲವು ಭಾಷೆಗಳ ಜನ ತೂತುಕುಡಿಯಲ್ಲಿನ ಘಟನೆ ಬಗ್ಗೆ ಟ್ವಿಟರ್‌ನಲ್ಲಿ ವಿವರಿಸಿದ್ದಾರೆ. ಇದರೊಂದಿಗೆ ಹೋರಾಟವು ದೇಶ ವ್ಯಾಪಿಸಿದಂತಾಗಿದೆ.
ಇನ್ನು ಈ ಪ್ರಕರಣದ ತನಿಖೆಯ ಸ್ಥಿತಿಗತಿಯ ಕುರಿತು ತೂತುಕುಡಿ ಎಸ್‌ಪಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠಕ್ಕೆ ಶುಕ್ರವಾರ ವರದಿ ಸಲ್ಲಿಸಿದ್ದಾರೆ.
ತಮಿಳುನಾಡಿನ ವಿರೋಧ ಪಕ್ಷಗಳು ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ. ಕಾನೂನು ಕೈಗೆತ್ತಿಕೊಳ್ಳಲು ಸರ್ಕಾರ ಪೊಲೀಸರಿಗೆ ಅನುಮತಿ ನೀಡಿದೆಯೇ ಎಂದು ಡಿಎಂಕೆ ಪ್ರಶ್ನೆ ಮಾಡಿದೆ. ಸಾವಿಗೆ ನ್ಯಾಯ ಒದಿಗುಸುವುದಾಗಿ ಆಡಳಿತರೂಢ ಎಐಎಡಿಎಂಕೆಯೂ ಜನರಿಗೆ ವಾಗ್ದಾನ ನೀಡಿದೆ.
ಟ್ವಿಟರ್‌ನಲ್ಲಿ ವ್ಯಕ್ತವಾಗಿರುವ ಆಕ್ರೋಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.