ADVERTISEMENT

ಹಿಟ್ಲರ್ ಕೂಡ ಚುನಾವಣೆಯಲ್ಲಿ ಜಯಿಸಿದ್ದ: ಪಿಎಂ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಐಎಎನ್ಎಸ್
Published 5 ಆಗಸ್ಟ್ 2022, 10:19 IST
Last Updated 5 ಆಗಸ್ಟ್ 2022, 10:19 IST
   

ನವದೆಹಲಿ: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಕೂಡ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದ ಎನ್ನುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಚುನಾವಣೆ ಗೆಲುವುಗಳ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ನಿರುದ್ಯೋಗ ಹಾಗೂ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್‌, ಎಲ್ಲ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿಯು ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದೆ ಎಂದು ಕುಟುಕಿದ್ದಾರೆ. 'ಹಿಟ್ಲರ್‌ ಕೂಡ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದ. ಅವನು ಅದನ್ನು ಸಾಧಿಸುತ್ತಿದ್ದದ್ದು ಹೇಗೆ? ಆತ ಜರ್ಮನಿಯ ಎಲ್ಲ ಸಂಸ್ಥೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ' ಎಂದಿದ್ದಾರೆ.

ಹಾಗೆಯೇ, 'ದೇಶದ ಸಂಪೂರ್ಣ ವ್ಯವಸ್ಥೆಯನ್ನು ನನಗೊಪ್ಪಿಸಿ. ಚುನಾವಣೆಗಲ್ಲಿ ಗೆಲ್ಲುವುದು ಹೇಗೆ ಎಂಬುದನ್ನು ನಿಮಗೆ ತೋರಿಸುತ್ತೇನೆ' ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, ನಾನು ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದಷ್ಟೂ, ನನ್ನ ಮೇಲೆ ದಾಳಿ ಮಾಡಲಾಗುತ್ತದೆ ಎಂದು ದೂರಿದ್ದಾರೆ.

'ಪ್ರಜಾಪ್ರಭುತ್ವ ಸಾಯುತ್ತಿದೆ. ನಿಮಗೆ ಏನನ್ನಿಸುತ್ತಿದೆ? ಕಳೆದ 70 ವರ್ಷಗಳಲ್ಲಿ ಕಟ್ಟಿದ್ದದೇಶವನ್ನು ಕಳೆದ 8 ವರ್ಷಗಳಲ್ಲಿ ನಾಶಮಾಡಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ನಾಲ್ಕು ಜನರ ಸರ್ವಾಧಿಕಾರಿ ಆಡಳಿತ ಚಾಲ್ತಿಯಲ್ಲಿದೆ. ಹಣದುಬ್ಬರದ ಬಗ್ಗೆ ಧ್ವನಿ ಎತ್ತಲು, ಚರ್ಚೆ ನಡೆಸಲು ನಾವು ಬಯಸುತ್ತಿದ್ದೇವೆ. ಆದರೆ, ನಮ್ಮನ್ನು ಬಂಧಿಸಲಾಗುತ್ತಿದೆ. ಸದನದಲ್ಲಿಯೂ ಚರ್ಚೆಗೆ ಅವಕಾಶ ನೀಡುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಾನು ನನ್ನ ಕೆಲಸ ಮಾಡುತ್ತೇನೆ. ಅದಕ್ಕಾಗಿ ನನ್ನ ಮೇಲೆ ಮತ್ತಷ್ಟು ದಾಳಿಗಳು ಆಗುತ್ತವೆ. ನಮ್ಮ ಬಗ್ಗೆ ಭಯ ಇರುವವರು, ನಮ್ಮನ್ನು ಹೆದರಿಸುತ್ತಿದ್ದಾರೆ. ಈಡೇರಿಸಲಾಗದ ಭರವಸೆಗಳನ್ನು ನೀಡಿದ್ದವರು, ಇದೀಗ ದೇಶದ ಪರಿಸ್ಥಿತಿಯ ಬಗ್ಗೆ ಭಯಗೊಂಡಿದ್ದಾರೆ. ಅವರು ಸುಳ್ಳುಗಾರರು. ದಿನದ 24 ಗಂಟೆಯೂ ಸುಳ್ಳು ಹೇಳುತ್ತಾರೆ' ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಕುಟುಂಬದ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದೂ ಆರೋಪಿಸಿರುವ ರಾಹುಲ್‌, 'ಗಾಂಧಿ ಕುಟುಂಬದದ ಮೇಲೆ ಅವರು ದಾಳಿ ಮಾಡುತ್ತಿರುವುದೇಕೆ? ಏಕೆಂದರೆ, ನಾವು ಸಿದ್ಧಾಂತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮಂತಹ ಕೋಟ್ಯಂತರ ಜನರಿದ್ದಾರೆ. ನಾವು ಪ್ರಜಾಪ್ರಭುತ್ವಕ್ಕಾಗಿ, ಕೋಮು ಸೌಹಾರ್ದಕ್ಕಾಗಿ ಹೋರಾಡುತ್ತಿದ್ದೇವೆ. ಇದನ್ನು ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಇದು ನನ್ನಿಂದ ಮಾತ್ರವಲ್ಲ, ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ' ಎಂದು ಹೇಳಿದ್ದಾರೆ.

ಹೆಚ್ಚೂ ಕಡಿಮೆ ಒಂದು ಶತಮಾನದಿಂದಒಂದೊಂದೇ ಇಟ್ಟಿಗೆಯಿಂದ ನಿರ್ಮಿಸಿದಭಾರತ ನಾಶವಾಗುತ್ತಿದೆ ಎಂದು ಕಿಡಿಕಾರಿರುವ ರಾಹುಲ್‌, 'ಸರ್ವಾಧಿಕಾರಿ ಧೋರಣೆಯ ವಿರುದ್ಧ ನಿಲ್ಲುವ ಯಾರ ಮೇಲಾದರೂ ಕೆಟ್ಟದಾಗಿಆಕ್ರಮಣ ಮಾಡಲಾಗುತ್ತದೆ. ಜೈಲಿಗೆ ಹಾಕಲಾಗುತ್ತದೆ ಮತ್ತು ಹಲ್ಲೆ ನಡೆಸಲಾಗುತ್ತದೆ' ಎಂದೂ ಆರೋಪಿಸಿದ್ದಾರೆ.

ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಹೆಚ್ಚಳದವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ,ಶಶಿ ತರೂರ್, ಕೆ.ಸಿ. ವೇಣುಗೋ‍ಪಾಲ್ ಹಾಗೂಕಾಂಗ್ರೆಸ್ ಪಕ್ಷದ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.