ಮುಂಬೈ: ಇಲ್ಲಿನ ಘಾಟ್ಕೊಪರ್ ಹೋರ್ಡಿಂಗ್ ದುರಂತ ಸ್ಥಳದಲ್ಲಿ ಮುಂದುವರಿದಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಕೇಂದ್ರ ವಿಪತ್ತು ನಿರ್ವಹಣಾ ದಳ ಗುರುವಾರ ಬೆಳಿಗ್ಗೆ ಅಂತ್ಯಗೊಳಿಸಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಘಾಟ್ಕೊಪರ್‌ನ ಪೆಟ್ರೋಲ್ ಬಂಕ್ ಮೇಲೆ 120X120 ಅಡಿಯ ಬೃಹತ್ ಗಾತ್ರದ ಹೋರ್ಡಿಂಗ್ ಬಿದ್ದಿತ್ತು. ಇದರ ಕೆಳಗೆ ಸಾಕಷ್ಟು ಜನರು ಸಿಲುಕಿಕೊಂಡಿದ್ದರು. ಇವರ ರಕ್ಷಣೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ ಧಾವಿಸಿತ್ತು. ಸುಮಾರು 66 ಗಂಟೆಗಳ ಕಾರ್ಯಾಚರಣೆ ಗುರುವಾರ ಬೆಳಿಗ್ಗೆ ಅಂತ್ಯಗೊಂಡಿದೆ.
ಬಿಎಂಸಿ ಆಯುಕ್ತ ಭೂಷಣ್ ಗಗ್ರಾನಿ ಅವರು ಸ್ಥಳ ಪರೀಶೀಲನೆ ನಂತರ ಕಾರ್ಯಾಚರಣೆ ಅಂತ್ಯಗೊಂಡಿರುವುದನ್ನು ಘೋಷಿಸಿದರು.
ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ವಾಯು ಸಂಚಾರ ನಿಯಂತ್ರಣ (ಎಟಿಸಿ) ಕೇಂದ್ರದ ನಿವೃತ್ತ ಮುಖ್ಯ ವ್ಯವಸ್ಥಾಪಕ ಹಾಗೂ ಅವರ ಪತ್ನಿ ಸೇರಿದ್ದಾರೆ. ಚಲಿಸುತ್ತಿದ್ದ ಇವರ ಕಾರು, ಕುಸಿದ ಬೃಹತ್ ಹೋರ್ಡಿಂಗ್ ಅಡಿ ಸಿಲುಕಿತ್ತು. ಇವರದ್ದೂ ಒಳಗೊಂಡಂತೆ 16 ಜನರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. 75 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕಾರ್ಯಾಚರಣೆ ಸಂದರ್ಭದಲ್ಲಿ ಹೋರ್ಡಿಂಗ್ ಕೆಲ ಭಾಗಗಳನ್ನು ಹಂತ ಹಂತವಾಗಿ ಕತ್ತರಿಸಿ, ಕೆಳಗೆ ಸಿಲುಕಿದ್ದ ಮೃತದೇಹ ಮತ್ತು ಬದುಕುಳಿದಿದ್ದ ಜನರನ್ನು ರಕ್ಷಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ಕೂಲಂಕಶವಾಗಿ ಪರಿಶೀಲಿಸಲಾಗಿದೆ. ಅಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಳ್ಳಲಾಗಿದೆ’ ಎಂದು ಗಗ್ರಾನಿ ತಿಳಿಸಿದ್ದಾರೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆ, ಮುಂಬೈ ಪೊಲೀಸ್, ಬಿಪಿಸಿಎಲ್, ಎನ್‌ಡಿಆರ್‌ಎಫ್, ಮುಂಬೈ ಅಗ್ನಿಶಾಮಕ ತಂಡ ಮತ್ತು ಮಹಾನಗರ ಗ್ಯಾಸ್ ಸಂಸ್ಥೆ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಪ್ರತಿಯೊಂದು ಇಲಾಖೆಯೂ ಸಮನ್ವಯತೆಯಿಂದ ಕೆಲಸ ಮಾಡಿವೆ. ಅಕ್ರಮ ಹಾಗೂ ಅನುಮತಿ ಇಲ್ಲದೆ ಹೋರ್ಡಿಂಗ್‌ಗಳನ್ನು ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೋರ್ಡಿಂಗ್‌ಗಳು ಯಾರಿಗೆ ಸೇರಿದ್ದು, ಅದು ಯಾರ ಜಾಗದಲ್ಲಿದೆ ಎಂಬುದು ಮುಖ್ಯವಲ್ಲ. ಅವು ಸರಿಯಾದ ಕ್ರಮದಲ್ಲಿ ಅಳವಡಿಸಿರಬೇಕಷ್ಟೇ’ ಎಂದಿದ್ದಾರೆ.
‘ಇಲ್ಲಿ ಗಾತ್ರವೊಂದನ್ನೇ ಪರಿಗಣಿಸುವುದಿಲ್ಲ. ಬದಲಿಗೆ ಅದನ್ನು ಅಳವಡಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಮತ್ತು ಅದು ಸದೃಢವಾಗಿ ನಿಲ್ಲಲು ಅಗತ್ಯವಿರುವ ನಿರ್ಮಾಣ ಕಾರ್ಯವೂ ಬಹಳಾ ಮುಖ್ಯ. ಹೋರ್ಡಿಂಗ್ ಅಳವಡಿಸಲು ಅದರ ಸ್ಥಿರತೆ ಸದೃಢವಾಗಿದೆ ಎಂದು ಪರವಾನಗಿ ಪಡೆಯುವುದು ಮುಖ್ಯ’ ಎಂದು ಗಗ್ರಾನಿ ಹೇಳಿದ್ದಾರೆ.
ಘಟನೆ ನಂತರ, ರೈಲ್ವೆ ಕೂಡಾ ತಮ್ಮ ಮಾರ್ಗದ ಇಕ್ಕೆಲಗಳಲ್ಲಿ ಅಳವಡಿಸಿರುವ ಹಾಗೂ ನಿರ್ದಿಷ್ಟ ಗುಣಮಟ್ಟದ್ದಲ್ಲಿಲ್ಲದ ಕೆಲವೊಂದು ಹೋರ್ಡಿಂಗ್‌ಗಳನ್ನು ತೆರವುಗೊಳಿಸಲು ಸೂಚಿಸಿದೆ. ಘಾಟ್ಕೊಪರ್‌ನಲ್ಲಿ ಬಿದ್ದ ಹೋರ್ಡಿಂಗ್‌ನ ಕೆಲ ಭಾಗ ರೈಲ್ವೆ ಪೊಲೀಸರಿಗೆ ಸೇರಿದ ಜಾಗದಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.