ADVERTISEMENT

ಕಾಂಗ್ರೆಸ್‌ ಪಕ್ಷದ ಎಲ್ಲ ಹುದ್ದೆಗಳಿಗೆ ಗುಲಾಂ ನಬಿ ಆಜಾದ್ ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2022, 8:18 IST
Last Updated 26 ಆಗಸ್ಟ್ 2022, 8:18 IST
ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌   

ನವದೆಹಲಿ: ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಗುಲಾಂ ನಬಿ ಆಜಾದ್‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ಪತ್ರವನ್ನು ರವಾನಿಸಿದ್ದಾರೆ. ಪಕ್ಷದೊಂದಿಗಿನ ತಮ್ಮ ಸುದೀರ್ಘ ಒಡನಾಟ ಮತ್ತು ಇಂದಿರಾ ಗಾಂಧಿ ಜೊತೆಗಿನ ನಿಕಟ ಸಂಬಂಧವನ್ನು ಪತ್ರದಲ್ಲಿ ವಿವರಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಆಜಾದ್, ‘ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕತ್ವದ ಚುಕ್ಕಾಣಿಯನ್ನು ಗಂಭೀರವಲ್ಲದ ವ್ಯಕ್ತಿಯೊಬ್ಬರ ಕೈಗೆ ನೀಡಲು ಯತ್ನಗಳು ನಡೆದವು. ಪಕ್ಷಕ್ಕೊಸ್ಕರ ಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಇದೆಲ್ಲವೂ ಕಾರಣ’ ಎಂದು ತಿಳಿಸಿದ್ದಾರೆ.

ADVERTISEMENT

ಕಳೆದ ಕೆಲ ವರ್ಷಗಳಲ್ಲಿ ಕಾಂಗ್ರೆಸ್‌ನ ಕುಸಿತದ ಬಗ್ಗೆ ಆಜಾದ್‌ ವಿವರಿಸಿದ್ದಾರೆ. ‘2014ರಿಂದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ, ಕಾಂಗ್ರೆಸ್ ಎರಡು ಲೋಕಸಭಾ ಚುನಾವಣೆಗಳನ್ನು ಅವಮಾನಕರ ರೀತಿಯಲ್ಲಿ ಸೋತಿದೆ. 2014-2022ರ ನಡುವೆ ನಡೆದ 49 ವಿಧಾನಸಭಾ ಚುನಾವಣೆಗಳಲ್ಲಿ 39ರಲ್ಲಿ ಪರಾಭವಗೊಂಡಿದೆ’ ಎಂದು ಆಜಾದ್‌ ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಪಕ್ಷವು ಕೇವಲ ನಾಲ್ಕು ರಾಜ್ಯಗಳ ಚುನಾವಣೆಗಳನ್ನು ಗೆದ್ದಿದೆ. ದುರದೃಷ್ಟವಶಾತ್, ಇಂದು ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬಾರದ ಸ್ಥಿತಿಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ. ‘ಭಾರತ್ ಜೋಡೋ’ ಅಭಿಯಾನದ ಬದಲಿಗೆ ‘ಕಾಂಗ್ರೆಸ್ ಜೋಡೋ’ ಅಭಿಯಾನ ಹಮ್ಮಿಕೊಳ್ಳಬೇಕಿತ್ತು ಎಂದೂ ಆಜಾದ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.