ರಾಯ್ಪುರ್: ಗುಲಾಂ ನಬಿ ಆಜಾದ್ ಅವರು ಪಕ್ಷವನ್ನು ತೊರೆದಿದ್ದರಲ್ಲಿ ಅಚ್ಚರಿಯೇನಿಲ್ಲ. ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಜಾದ್ ಪರವಾಗಿ ಕಣ್ಣೀರು ಹಾಕಿದಾಗಲೇ ಅವರು ಈ ಬಲೆಯಲ್ಲಿ ಬೀಳುತ್ತಾರೆ ಎಂಬುದು ಸ್ಪಷ್ಟವಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಅಧೀರ್ ಚೌಧರಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರನ್ನಾಗಿ ಆಜಾದ್ ಪುನಃ ಸಂಸತ್ತಿನ ಮೇಲ್ಮನೆಗೆ ಆಯ್ಕೆ ಮಾಡಿದ್ದಿದ್ದರೆ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಚೌಧರಿ ಆರೋಪಿಸಿದ್ದಾರೆ. ಕಳೆದ ವರ್ಷ ರಾಜ್ಯಸಭಾ ಸದಸ್ಯರಾಗಿ ಆಜಾದ್ ಅವರ ಅವಧಿ ಮುಕ್ತಾಯಗೊಂಡಿದೆ.
'ಕೊರೊನಾ ಸೋಂಕಿನಿಂದ 50 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದನ್ನು ಯಾರಾದರೂ ನೋಡಿದ್ದೀರಾ? ಆದರೆ ರಾಜ್ಯಸಭೆಯಿಂದ ಆಜಾದ್ ಅವರು ನಿವೃತ್ತರಾದಾಗ (ಫೆಬ್ರುವರಿ 2021ರಲ್ಲಿ) ಕಣ್ಣೀರು ಹರಿಸಿದರು. ಅವತ್ತೇ ಆಜಾದ್ ಅವರು ಮೋದಿಯ ಸಂಚಿನ ಬಲೆಗೆ ಬಿದ್ದರು ಎಂಬುದು ನಮಗೆ ಸ್ಪಷ್ಟವಾಯಿತು' ಎಂದು ಚೌಧರಿ ತಿಳಿಸಿದರು.
ಆಜಾದ್ ಅವರಿಗೆ ಪಕ್ಷ ಏನು ಕೊಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮಾಡಿದೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ನೀಡಿದೆ ಎಂದರು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವರಾಗಿದ್ದವರು ಅಥವಾ ಸಂಸದರಾಗಿದ್ದವರು ಎಲ್ಲರೂ ದೆಹಲಿಯ ತಮ್ಮ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಆದರೆ ಗುಲಾಂ ನಬಿ ಆಜಾದ್ ಅವರು ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಗೆ ಶುಕ್ರವಾರ ರಾಜೀನಾಮೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.