ADVERTISEMENT

ಬಹುತೇಕ ಭಾರತೀಯ ಮುಸ್ಲಿಮರು ಮತಾಂತರಗೊಂಡಿರುವ ಹಿಂದೂಗಳು: ಗುಲಾಂ ನಬಿ ಆಜಾದ್‌

ಪಿಟಿಐ
Published 17 ಆಗಸ್ಟ್ 2023, 20:35 IST
Last Updated 17 ಆಗಸ್ಟ್ 2023, 20:35 IST
ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌   

ದೋಡಾ (ಜಮ್ಮು–ಕಾಶ್ಮೀರ): ‘ಬಹುತೇಕ ಭಾರತೀಯ ಮುಸ್ಲಿಮರು ಮತಾಂತರವಾಗುವುದಕ್ಕೆ ಮೊದಲು ಹಿಂದೂಗಳಾಗಿದ್ದರು. ಕಾಶ್ಮೀರ ಕಣಿವೆಯಲ್ಲಿ ಈ ಮಾತಿಗೆ ನಿದರ್ಶನ ಕಾಣಬಹುದು. ಇಲ್ಲಿನ ಬಹುತೇಕ ಕಾಶ್ಮೀರಿ ಪಂಡಿತರು ಇಸ್ಲಾಮ್‌ಗೆ ಮತಾಂತರಗೊಂಡಿದ್ದಾರೆ’ ಎಂದು ಪ್ರಜಾಸತ್ತಾತ್ಮಕ ಪ್ರಗತಿಪರ ಆಜಾದ್‌ ಪಕ್ಷದ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ದೋಡಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಕೀಯ ಲಾಭಕ್ಕಾಗಿ ಯಾರೂ ಧರ್ಮವನ್ನು ಬಳಸಿಕೊಳ್ಳಬಾರದು. ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವವರು ದುರ್ಬಲ ವ್ಯಕ್ತಿಗಳು’ ಎಂದರು.

‘ಕೆಲ ಮುಸ್ಲಿಮರು ಹೊರಗಿನಿಂದ ಬಂದಿದ್ದಾರೆ ಎಂಬುದಾಗಿ ಬಿಜೆಪಿಯ ಕೆಲ ನಾಯಕರು ಹೇಳಿದ್ದಾರೆ. ಹೊರಗಿನಿಂದಾಗಲಿ, ಒಳಗಿನಿಂದಾಗಲಿ ಇಲ್ಲಿಗೆ ಬಂದವರು ಇಲ್ಲ. ಇಸ್ಲಾಂ 1,500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಧರ್ಮ. ಹಿಂದೂ ಧರ್ಮ ಅತ್ಯಂತ ಪ್ರಾಚೀನವಾದುದು. ಹೀಗಾಗಿ ಮುಸ್ಲಿಮರ ಪೈಕಿ 10–20 ಮಂದಿ ಹೊರಗಿನಿಂದ ಬಂದವರಿರಬಹುದು. ಕೆಲವರು ಮೊಗಲರ ಸೈನ್ಯದಲ್ಲಿ ಇದ್ದಿರಬಹುದು’ ಎಂದು ಹೇಳಿದ್ದಾರೆ.

ADVERTISEMENT

‘ಜಮ್ಮು–ಕಾಶ್ಮೀರ ಮುಸ್ಲಿಮರು 600 ವರ್ಷಗಳ ಹಿಂದೆ ಏನಾಗಿದ್ದರು’ ಎಂದು ಪ್ರಶ್ನಿಸಿದ ಅವರು, ‘ಅವರೆಲ್ಲರೂ ಕಾಶ್ಮೀರಿ ಪಂಡಿತರೇ ಆಗಿದ್ದರು. ಇಸ್ಲಾಂಗೆ ಮತಾಂತರವಾದರು’ ಎಂದು ಆಜಾದ್‌ ಹೇಳಿದ್ದಾರೆ.

‘ಹಿಂದೂಗಳು ಮೃತಪಟ್ಟಾಗ, ಅವರ ದೇಹವನ್ನು ಸುಡಲಾಗುತ್ತದೆ. ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ನದಿ ನೀರನ್ನೇ ನಾವೆಲ್ಲಾ ಕುಡಿಯುತ್ತೇವೆ. ಅದೇ ರೀತಿ ಮುಸ್ಲಿಮರು ಸತ್ತಾಗ ಅವರ ಮಾಂಸ, ಮೂಳೆಗಳು ಕೂಡ ಈ ಭಾರತದ ಮಣ್ಣು ಸೇರುತ್ತವೆ. ಹಿಂದೂ ಮತ್ತು ಮುಸ್ಲಿಮರು ಈ ನೆಲದ ಮಣ್ಣು ಸೇರುತ್ತಾರೆ. ಹೀಗಾಗಿ, ಇಬ್ಬರ ನಡುವೆ ಏನು ವ್ಯತ್ಯಾಸ ಇದೆ’ ಎಂದು ಆಜಾದ್‌ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.