ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ತನ್ನ 13 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಸ್ಥಾಪಿಸಿರುವ ಪಕ್ಷಕ್ಕೆ ಇದು ಚೊಚ್ಚಲ ವಿಧಾನಸಭಾ ಚುನಾವಣೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆರ್.ಎಸ್.ಚಿಬ್ ಅವರು ಪಟ್ಟಿ ಬಿಡುಗಡೆ ಮಾಡಿದರು.
ಪಕ್ಷವು ಮಾಜಿ ಸಚಿವ ಅಬ್ದುಲ್ ಮಜೀದ್ ವಾನಿ ಅವರನ್ನು ಡೋಡಾ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಮಾಜಿ ಶಾಸಕ ಮೊಹಮ್ಮದ್ ಅಮೀನ್ ಬಟ್ (ದೇವಸರ್ ಕ್ಷೇತ್ರ), ಮಾಜಿ ಅಡ್ವೊಕೇಟ್ ಜನರಲ್ ಮೊಹಮ್ಮದ್ ಅಸ್ಲಮ್ ಗೋನಿ (ಭದ್ರವಾಹ್), ಡಿಡಿಸಿ ಸದಸ್ಯ ಸಲೀಂ ಪಾರಿ (ದೂರೂ) ಮತ್ತು ಮುನೀರ್ ಅಹ್ಮದ್ ಮೀರ್ (ಲೊಲಾಬ್) ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಬಿಲಾಲ್ ಅಹ್ಮದ್ ದೆವಾ (ಅನಂತನಾಗ್ ಪಶ್ಚಿಮ), ಗುಲಾಂ ನಬಿ ವಾನಿ (ರಾಜಪೊರಾ), ಮೀರ್ ಅಲ್ತಾಫ್ ಹುಸೇನ್ (ಅನಂತನಾಗ್), ಕೈಸರ್ ಸುಲ್ತಾನ್ ಗನೈ (ಗಾಂದೆರ್‌ಬಲ್), ಗುಲಾಂ ನಬಿ ಬಟ್ (ಈದ್ಗಾ), ಅಮೀರ್ ಅಹ್ಮದ್ ಬಟ್ (ಖಾನ್ಯಾರ್), ನಿಸಾರ್ ಅಹ್ಮದ್ ಲೋನ್ (ಗುರೇಜ್) ಮತ್ತು ಪೀರ್ ಬಿಲಾಲ್ ಅಹ್ಮದ್ (ಹಜ್ರತ್‌ಬಾಲ್) ಅವರೂ ಕಣಕ್ಕಿಳಿಯಲಿದ್ದಾರೆ.
ಅಮೀರ್ ಅಹ್ಮದ್ ಬಟ್ ಅವರು ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶ್ರೀನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
‘ಜೆಇಐ ನಿಷೇಧ ಹಿಂಪಡೆಯಲಿ’
‘ಜಮಾತ್–ಎ–ಇಸ್ಲಾಮಿ (ಜೆಇಐ) ಜಮ್ಮು ಕಾಶ್ಮೀರ ಸಂಘಟನೆ ಮೇಲೆ ಹೇರಿರುವ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜೆಇಐ ನಾಯಕರು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ‘ಕೇಂದ್ರ ಸರ್ಕಾರವು ಜೆಇಐ ಮೇಲಿನ ನಿಷೇಧ ಹಿಂಪಡೆಯಬೇಕೆಂದು ಬಯಸುತ್ತೇನೆ. ಏಕೆಂದರೆ ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸುವ ಮುಸ್ಲಿಮರನ್ನು ಹತ್ಯೆ ಮಾಡುವ ದೇಶದಲ್ಲಿ ವಿಷವನ್ನು ಹರಡುವ ಕೋಮುವಾದಿ ಸಂಘಟನೆಗಳನ್ನು ನಿಮಗೆ ನಿಷೇಧಿಸಲು ಆಗಿಲ್ಲ. ಹೀಗಿರುವಾಗ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿರುವ 2014ರ ಪ್ರವಾಹ ಮತ್ತು ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿರುವ ಜೆಇಐ ಮೇಲೆ ನಿಷೇಧ ಏಕೆ?’ ಎಂದು ಮುಫ್ತಿ ಅವರು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.