ADVERTISEMENT

ಮೋದಿಯ ಶ್ಲಾಘಿಸಿದ ಬೆನ್ನಲ್ಲೇ ಜಮ್ಮುವಿನಲ್ಲಿ ಗುಲಾಂ ನಬಿ ಆಜಾದ್ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 10:07 IST
Last Updated 2 ಮಾರ್ಚ್ 2021, 10:07 IST
ಗುಲಾಂ ನಬಿ ಆಜಾದ್ (ಪಿಟಿಐ ಸಂಗ್ರಹ ಚಿತ್ರ)
ಗುಲಾಂ ನಬಿ ಆಜಾದ್ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಜಮ್ಮುವಿನಲ್ಲಿ ಪಕ್ಷದ ಕಾರ್ಯಕರ್ತರು ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡಿದ ನಾಯಕರ ಗುಂಪಿನ (ಜಿ–23 ಎಂದೇ ಖ್ಯಾತವಾಗಿದೆ) ಸಭೆ ಶನಿವಾರ ಜಮ್ಮುವಿನಲ್ಲಿ ನಡೆದಿತ್ತು. ಅದಲ್ಲಿ ಆಜಾದ್‌ ಕೂಡ ಪ್ರಮುಖರು. ಈ ಸಭೆಯ ಮರುದಿನ ಆಜಾದ್ ಅವರು ಮೋದಿ ಅವರನ್ನು ಶ್ಲಾಘಿಸಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸುತ್ತಿರುವ, ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೆಯಾಗಿವೆ. ಪಕ್ಷವು ಆಜಾದ್‌ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ಆದರೆ, ಇಂದು ಪಕ್ಷವನ್ನು ಬೆಂಬಲಿಸಬೇಕಾದ ಸಂದರ್ಭದಲ್ಲಿ ಅವರು ಬಿಜೆಪಿಯೊಂದಿಗೆ ಸ್ನೇಹ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಿನ್ನೆಲೆಯನ್ನು ಮುಚ್ಚಿಡಲು ಯತ್ನಿಸಲಿಲ್ಲ. ಇಂತಹ ನಾಯಕರನ್ನು ಇದಕ್ಕಾಗಿಯೇ ನಾನು ಇಷ್ಟಪಡುತ್ತೇನೆ ಎಂದು ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದರು.

‘ನಾನು ಹಳ್ಳಿಯಿಂದ ಬಂದವನು. ಆ ಬಗ್ಗೆ ನನಗೆ ಹೆಮ್ಮೆಯಿದೆ. ನಮ್ಮ ಪ್ರಧಾನ ಮಂತ್ರಿಯಂತಹ ನಾಯಕರ ಬಗ್ಗೆ ನನಗೆ ಬಹಳ ಮೆಚ್ಚುಗೆಯಿದೆ. ಅವರೂ ಹಳ್ಳಿಯಿಂದ ಬಂದವರೆಂದು ಹೇಳಿಕೊಂಡಿದ್ದಾರೆ. ಚಹಾ ಮಾರಾಟ ಮಾಡುತ್ತಿದ್ದುದಾಗಿಯೂ ಹೇಳಿದ್ದಾರೆ. ನನಗೆ ಮೋದಿ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರು ಕೂಡ ಚಹಾ ಮಾರಾಟಗಾರರಾಗಿದ್ದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ’ ಎಂದು ಆಜಾದ್ ಹೇಳಿದ್ದರು.

ಮೋದಿ ಅವರೂ ಇತ್ತೀಚೆಗೆ ರಾಜ್ಯಸಭೆಯಲ್ಲಿ ಆಜಾದ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆಜಾದ್ ಹಾಗೂ ನಿವೃತ್ತರಾಗುತ್ತಿರುವ ರಾಜ್ಯಸಭೆ ಸದಸ್ಯರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಮಾತನಾಡಿದ್ದ ಮೋದಿ, ‘ಗುಲಾಂ ನಬಿ ಜೀ (ಪ್ರತಿಪಕ್ಷ ನಾಯಕ) ಅವರ ಸ್ಥಾನವನ್ನು ತುಂಬುವುದು ಕಷ್ಟವಿದೆ. ಅವರಂತೆಯೇ ಕೆಲಸ ಮಾಡುವುದು ಸುಲಭವಲ್ಲ. ಅವರು ತಮ್ಮ ಪಕ್ಷದ ಬಗ್ಗೆ ಮಾತ್ರ ಕಾಳಜಿ ಇದ್ದವರಲ್ಲ. ಇಡೀ ದೇಶ ಹಾಗೂ ಸದನದ ಬಗ್ಗೆ ಕಾಳಜಿಯುಳ್ಳವರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಮಾತುಗಳನ್ನಾಡುವ ಮಧ್ಯೆ ಮೋದಿ ಅವರು ಹಲವು ಬಾರಿ ಗದ್ಗದಿತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.