ನವದೆಹಲಿ: ಬಿಹಾರದ ಬೇಗುಸರಾಯ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್‌ಗೆ ಚುನಾವಣಾ ಆಯೋಗ ಸೋಮವಾರ ನೋಟಿಸ್ ನೀಡಿದೆ. ಉತ್ತರಿಸಲು 24 ಗಂಟೆ ಗಡುವು ನೀಡಿದೆ.
ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿರುವ ಆಯೋಗ, ಚುನಾವಣೆಯಲ್ಲಿ ಜಾತಿ ಹಾಗೂ ಧರ್ಮವನ್ನು ಬಳಸಿಕೊಳ್ಳುವುದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದೂ ಅಭಿಪ್ರಾಯಪಟ್ಟಿದೆ.
ಏಪ್ರಿಲ್ 24ರಂದು ಬೇಗುಸರಾಯ್‌ನಲ್ಲಿ ಮಾತನಾಡಿದ್ದ ಗಿರಿರಾಜ್ ಸಿಂಗ್, ‘ಯಾರು ವಂದೇ ಮಾತರಂ ಹೇಳುವುದಿಲ್ಲವೋ ಅಥವಾ ತಾಯ್ನಾಡಿಗೆ ಗೌರವ ನೀಡುವುದಿಲ್ಲವೋ ಅವರನ್ನು ದೇಶ ಕ್ಷಮಿಸುವುದಿಲ್ಲ. ನನ್ನ ಪೂರ್ವಜರು ಮೃತಪಟ್ಟಾಗ ಅವರ ಸಮಾಧಿಗೆ ಸ್ಥಳದ ಅಭಾವ ಇರಲಿಲ್ಲ. ಆದರೆ ನಿಮಗೆ ಮೂರಡಿ ಜಾಗವಾದರೂ ಬೇಡವೇ‘ ಎಂದು ಮತದಾರರನ್ನು ಉದ್ದೇಶಿಸಿ ಹೇಳಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂಈ ವೇಳೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.