ತಿರುವನಂತಪುರ: ವರದಕ್ಷಿಣೆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಕೇರಳದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಹಾನಾ ಮೃತ ಯುವತಿ. ಇವರು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಇವರು ತಾಯಿ ಮತ್ತು ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿದ್ದರು. ಶಹಾನಾ ಅವರು ಡಾ.ರುವೈಸಾ ಎನ್ನುವ ಯುವಕನನ್ನು ಪ್ರೀತಿಸಿದ್ದರು.
ಮದುವೆ ಮಾತುಕತೆ ವೇಳೆ ಶಹಾನಾ ಕುಟುಂಬದ ಬಳಿ ಯುವಕನ ಕುಟುಂಬ 150 ಪವನ್ ಚಿನ್ನ, 15 ಎಕರೆ ಜಾಗ ಮತ್ತು ಬಿಎಂಡಬ್ಲ್ಯೂ ಕಾರನ್ನು ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಕುಟುಂಬ ಅಷ್ಟೊಂದು ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಯುವಕ ಮತ್ತು ಆತನ ಕುಟುಂಬದವರು ಮದುವೆಯನ್ನು ನಿರಾಕರಿಸಿದ್ದರು. ಇದರಿಂದ ಮನನೊಂದ ಶಹಾನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್‌ನಲ್ಲಿ ‘ಎಲ್ಲರಿಗೂ ಹಣ ಮಾತ್ರ ಬೇಕು’ ಎಂದು ಬರೆದಿದ್ದಾರೆ ಎನ್ನಲಾಗಿದೆ.
ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೇರಳ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ, ನಗರ ಪೊಲೀಸ್ ಕಮಿಷನರ್ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಡಿ.14ರೊಳಗೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಎದುರು ವರದಿ ಸಲ್ಲಿಸುವಂತೆ ಹೇಳಲಾಗಿದೆ.
ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಪಿ.ಸತಿದೇವಿ ಅವರು ಮೃತ ಯುವತಿ ಶಹಾನಾ ಕುಟುಂಬವನ್ನು ಭೇಟಿ ಮಾಡಿ, ಘಟನೆಗೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆಯಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.