ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಿಂದ ಭಾರಿ ಸಂಚಲನ ಸೃಷ್ಟಿಯಾಗಿದ್ದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.
ಗನ್ ಪಾಯಿಂಟ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ 5ನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ದ್ವಾರಕಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಡೆದಿರುವ ಕೃತ್ಯ ತಡವಾಗಿ ಬಯಲಾಗಿದೆ. ಬಾಲಕಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಮನೆಗೆ ನುಗ್ಗಿದ ದುಷ್ಕರ್ಮಿ, ಆಕೆಯನ್ನು ಸಮೀಪದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಕಟ್ಟಡದ 5ನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.
ಸಂತ್ರಸ್ತ ಬಾಲಕಿಯನ್ನು ಕೂಡಲೇ ದೀನ್ ದಯಾಳ್ ಉಪಾಧ್ಯಾಯ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕಿಯ ಒಂದು ಕಾಲು ಮುರಿದಿದೆ.
ಬಾಲಕಿಗೆ ಆಪ್ತ ಸಮಾಲೋಚನೆ ನಡೆಸಲಾಗಿದ್ದು, ಆಕೆ ದಾಖಲಿಸಿರುವ ಹೇಳಿಕೆಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿ, ಬಹುಮಹಡಿ ಕಟ್ಟಡದಿಂದ ದೂಡಲಾಯಿತು ಎಂದು ತಿಳಿಸಿದ್ದಾಳೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಗಳ ಸೆಕ್ಷನ್ 127(2)(ಅಕ್ರಮ ಬಂಧನ), 65(1)(16 ವರ್ಷದ ಒಳಗಿನ ಹೆಣ್ಣಿನ ಮೇಲೆ ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 109(1)(ಹತ್ಯೆ ಯತ್ನ) ಅಡಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.