ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್ಐಟಿ) ಹಾಸ್ಟೆಲ್‌ನಲ್ಲಿ ಎಲೆಕ್ಟ್ರಿಷಿಯನ್‌ವೊಬ್ಬ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಾಸ್ಟೆಲ್‌ನ ವಾರ್ಡನ್ ಈ ಘಟನೆಗೆ ಸಂತ್ರಸ್ತೆಯನ್ನೇ ದೂರಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಆರೋಪಿ ಎಲೆಕ್ಟ್ರಿಷಿಯನ್, ಕೆಟ್ಟುಹೋಗಿದ್ದ ವೈ–ಫೈ ಸಂಪರ್ಕವನ್ನು ಸರಿಪಡಿಸಲು ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿಯ ಕೊಠಡಿಗೆ ಬಂದಿದ್ದಾನೆ. ವಿದ್ಯಾರ್ಥಿನಿಯ ಎದುರು ಬಟ್ಟೆ ಬಿಚ್ಚಿ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯು ಕೊಠಡಿಯಿಂದ ಹೊರಬಂದು ಇತರರಿಗೆ ವಿಷಯ ತಿಳಿಸಿದ್ದಾರೆ. ವಿದ್ಯಾರ್ಥಿನಿಯ ದೂರನ್ನು ಆಧರಿಸಿ ತಿರುಚಿರಾಪಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಾರ್ಡನ್ ವಿರುದ್ಧ ಪ್ರತಿಭಟನೆ: ‘ವಿದ್ಯಾರ್ಥಿನಿ ಧರಿಸಿದ್ದ ಬಟ್ಟೆಯ ಬಗ್ಗೆ ಟೀಕಿಸಿರುವ ವಾರ್ಡನ್, ಘಟನೆಗೆ ಆಕೆಯನ್ನೇ ದೂರಿದ್ದಾರೆ’ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದ್ದಾರೆ. ಮಾತ್ರವಲ್ಲ, ಈ ಘಟನೆಯನ್ನು ‘ದೊಡ್ಡ ವಿವಾದ’ವಾಗಿ ಮಾಡಬೇಡ ಎಂದೂ ಆಕೆಗೆ ಹೇಳಿದ್ದಾಗಿ ಆರೋಪಿಸಲಾಗಿದೆ.
ವಾರ್ಡನ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಗುರುವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು. ಎನ್‌ಐಟಿ ನಿರ್ದೇಶಕರ ನಿವಾಸದ ಬಳಿಯೂ ಧರಣಿ ಕುಳಿತರು. ವಾರ್ಡನ್ ಕ್ಷಮೆಯಾಚಿಸಬೇಕು ಮತ್ತು ಹಾಸ್ಟೆಲ್ ಆವರಣದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ತಿರುಚಿರಾಪಳ್ಳಿ ಎಸ್‌ಪಿ ವಿ.ವರುಣ್‌ಕುಮಾರ್ ಅವರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಎನ್‌ಐಟಿ ಆಡಳಿತ ಮಂಡಳಿಯ ಗಮನಕ್ಕೆ ತಂದು ಅವುಗಳನ್ನು ಈಡೇರಿಸುವ ಭರವಸೆ ನೀಡಿದರು. ಆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.