ಭರೂಚ್, ಗುಜರಾತ್: ‘ಹಿಜಾಬ್ ತೆಗೆಯುವಂತೆ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ ತಮ್ಮ ಮಕ್ಕಳಿಗೆ ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಸೂಚಿಸಿದ್ದಾರೆ’ ಎಂದು ಕೆಲ ವಿದ್ಯಾರ್ಥಿನಿಯರ ತಂದೆ–ತಾಯಿ ಆರೋಪಿಸಿದ್ದಾರೆ.
ಆರೋಪದ ಹಿಂದೆಯೇ ಸಂಬಂಧಿಸಿದ ಅಧಿಕಾರಿ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಕೆಲ ಮಕ್ಕಳ ತಂದೆ–ತಾಯಿಗಳ ಪ್ರಕಾರ, ಜಿಲ್ಲೆಯ ಅಂಕಲೇಶ್ವರ ಪಟ್ಟಣದ ಖಾಸಗಿ ಲಯನ್ಸ್ ಶಾಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಬುಧವಾರ 10ನೇ ತರಗತಿ ಗಣಿತ ವಿಷಯದ ಪರೀಕ್ಷೆ ಇತ್ತು. ಪರೀಕ್ಷೆ ಆರಂಭಕ್ಕೂ ಮೊದಲು ಪ್ರಾಚಾರ್ಯರೂ ಆಗಿದ್ದ ಆಡಳಿತಾಧಿಕಾರಿ ಇಳಾಬೆನ್ ಸೂರತ್ಯ ಅವರು ಹಿಜಾಬ್ ತೆಗೆಯುವಂತೆ ಸೂಚಿಸಿದರು ಎಂದು ಹೇಳಲಾಗಿದೆ.
ದೂರುಗಳ ಹಿಂದೆಯೇ ಆಡಳಿತಾಧಿಕಾರಿ ಹೊಣೆಯಿಂದ ಅಧಿಕಾರಿ ತೆಗೆಯುವಂತೆ ಶಿಕ್ಷಣ ಇಲಾಖೆಯು ಆದೇಶಿಸಿದೆ.
ಪರೀಕ್ಷಾ ನಿಯಮದ ಪ್ರಕಾರ, ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ. ಕೆಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯಲು ಸೂಚಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಶಿಕ್ಷಣ ಇಲಾಖೆ ನಿರ್ದೇಶಕ (ಪರೀಕ್ಷೆ) ಎಂ.ಕೆ.ರಾವಲ್ ಅವರು, ‘ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಇಲ್ಲ. ಆದರೆ, ಪ್ರವೇಶಪತ್ರದ ಚಿತ್ರದಲ್ಲಿರುವಂತೆ ವಿದ್ಯಾರ್ಥಿನಿಯರ ಗುರುತು ಪರಿಶೀಲಿಸಲು ಅವಕಾಶವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.