ನವದೆಹಲಿ: ಹೊಸ ಐಟಿ ನಿಯಮಗಳ ಅನುಷ್ಠಾನ ಮತ್ತು ಪಾಲನೆ ಕುರಿತು 15 ದಿನಗಳಲ್ಲಿ ವರದಿ ನೀಡುವಂತೆ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ನೂತನ ಐಟಿ ನಿಯಮಗಳ ಪಾಲನೆ ಕುರಿತು ಡಿಜಿಟಲ್ ಸುದ್ದಿ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರದ ನಿಯಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿದ್ದೇವೆ ಎಂದು ಸುಮಾರು 60 ಆನ್‌ಲೈನ್ ಪೋರ್ಟಲ್ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳ ಮುಖ್ಯಸ್ಥರು ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ.
'ಡಿಜಿಟಲ್ ಮಾಧ್ಯಮ ಕಂಪನಿಯ ಪೂರ್ವ ನೋಂದಣಿ ಕಡ್ಡಾಯವಿಲ್ಲ. ಆದರೆ, ಕಂಪನಿಯ ಬಗ್ಗೆ ಮಾಹಿತಿಯನ್ನು ಒದಗಿಸುವುದು ಅನಿವಾರ್ಯ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಇದೇ ವರ್ಗದ ಉನ್ನತ ವ್ಯಕ್ತಿಯ ನೇತೃತ್ವದಲ್ಲಿ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.