ಮುಂಬೈ: 'ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪರಿಹಾರ ಧನವಾಗಿ ನೀಡಬೇಕು' ಎಂದು ಒಡಿಶಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ನಟ ಸೋನು ಸೂದ್ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೊ ಮಾಡಿ ಮಾತನಾಡಿರುವ ಅವರು, 'ಇಂತಹ ದುರ್ಘಟನೆಗಳು ನಡೆದಾಗ ನಾವೆಲ್ಲ ಸಂತಾಪ ಸೂಚಿಸಿ, ಅಯ್ಯೋ ಎಂದು ಸುಮ್ಮನಾಗುತ್ತೇವೆ. ಆದರೆ, ತಮ್ಮ ಹೊಟ್ಟೆಪಾಡಿಗೆ ಊರಿಂದ ಊರಿಗೆ ಹೋಗುವಾಗ ಹೀಗೆ ಹೆಣವಾದ ಕಾರ್ಮಿಕರು, ದಿನಗೂಲಿಯವರು, ಕಡಿಮೆ ಆದಾಯ ಹೊಂದಿರುವವರ ಸಂತ್ರಸ್ತರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
'ಈ ಮಹಾ ದುರಂತದಲ್ಲಿ ಅನೇಕ ಕುಟುಂಬಗಳು ವಿನಾಶವಾಗಿವೆ. ಹಾಗಾಗಿ ಕೂಡಲೇ ಸರ್ಕಾರಗಳೇ ಮುಂದೆ ನಿಂತು ಪ್ರತಿತಿಂಗಳು ಸಂತ್ರಸ್ತರಿಗೆ ಮಾಸಿಕ ವೇತನ ಸಿಗುವಂತೆ ನೋಡಿಕೊಳ್ಳಬೇಕು. ಶಕ್ತಿ ಇದ್ದವರು ಸಹಾಯ ಮಾಡಲು ಇದು ಸಮಯ' ಎಂದು ಮನವಿ ಮಾಡಿದ್ದಾರೆ.
ರೈಲು ಅವಘಡದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ₹10 ಲಕ್ಷ, ತೀವ್ರವಾಗಿ ಗಾಯಗೊಂಡವರಿಗೆ ₹2 ಲಕ್ಷ ಮತ್ತು ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ ₹50,000 ನೆರವು ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಘೋಷಿಸಿದ್ದರು.
ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್‌ಎಫ್) ಪ್ರತ್ಯೇಕವಾಗಿ ಮೃತರ ಕುಟುಂಬಸ್ಥರಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ನೀಡುವುದಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿತ್ತು.
ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಭಾನುವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.