ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: ಹವಾಮಾನ ಪ್ರತಿಕೂಲ ಪರಿಸ್ಥಿತಿ ಇಲ್ಲ– ಹವಾಮಾನ ಇಲಾಖೆ

ಪಿಟಿಐ
Published 7 ಫೆಬ್ರುವರಿ 2021, 12:35 IST
Last Updated 7 ಫೆಬ್ರುವರಿ 2021, 12:35 IST
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಹಿಮಪಾತದಿಂದಾಗಿ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿ ನೀತಿ ಕಣಿವೆಯಲ್ಲಿನ ರಿಷಿಗಂಗಾ ವಿದ್ಯುತ್ ಯೋಜನೆಗೆ ಹಾನಿಯುಂಟಾಗಿರುವುದು
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಹಿಮಪಾತದಿಂದಾಗಿ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿ ನೀತಿ ಕಣಿವೆಯಲ್ಲಿನ ರಿಷಿಗಂಗಾ ವಿದ್ಯುತ್ ಯೋಜನೆಗೆ ಹಾನಿಯುಂಟಾಗಿರುವುದು   

ನವದೆಹಲಿ: ಹಿಮಪಾತದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರಾಖಂಡದ ಚಮೋಲಿ, ತಪೋವನ ಮತ್ತು ಜೋಶಿಮಠದ ಮೇಲೆ ಫೆಬ್ರುವರಿ 7 ಮತ್ತು 8 ರಂದು ಯಾವುದೇ ಹವಾಮಾನ ಪ್ರತಿಕೂಲ ಪರಿಸ್ಥಿತಿಯ ಪರಿಣಾಮ ಉಂಟಾಗುವ ಸಂಭವವಿಲ್ಲ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

ಚಮೋಲಿ, ತಪೋವನ ಮತ್ತು ಜೋಶಿಮಠದಲ್ಲಿ ಈ ಎರಡು ದಿನಗಳಲ್ಲಿ ಶುಷ್ಕ ಹವಾಮಾನವನ್ನು ಕಾಣುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೆಚ್ಚುವರಿ ಮಹಾನಿರ್ದೇಶಕ ಆನಂದ್ ಶರ್ಮಾ ತಿಳಿಸಿದ್ದಾರೆ.

ಫೆಬ್ರವರಿ 7-8ರಂದು ಹಿಮಪಾತ ಅಥವಾ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಐಎಂಡಿ ತನ್ನ ಹವಾಮಾನ ವಿಶೇಷ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಫೆಬ್ರವರಿ 9 ಮತ್ತು 10 ರಂದು ಚಮೋಲಿ ಜಿಲ್ಲೆಯ ಉತ್ತರ ಭಾಗಗಳಲ್ಲಿ ಲಘು ಮಳೆ / ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಉತ್ತರಾಖಂಡದಲ್ಲಿ ಜೋಶಿಮಠದಲ್ಲಿ ಭಾನುವಾರ ಸಂಭವಿಸಿದ ಹಿಮಪಾತದಲ್ಲಿ ತಪೋವನ-ರೆನಿಯಲ್ಲಿನ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚಿನ ಕಾರ್ಮಿಕರು ಮೃತಪಟ್ಟಿರುವ ಶಂಕೆಯಿದೆ ಎಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಹಿಮಪಾತದಿಂದಾಗಿ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಏರ್ಪಟ್ಟಿದ್ದು, ಪರ್ವತದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಯಿತು. ಈವರೆಗೆ 9-10 ಮೃತದೇಹಗಳು ಪತ್ತೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.