ADVERTISEMENT

ತುರ್ತು ಪರಿಸ್ಥಿತಿ ಹೇರಿಕೆಯನ್ನು ಸ್ಪೀಕರ್ ಖಂಡಿಸಿದ್ದಕ್ಕೆ ಸಂತೋಷವಾಯಿತು: ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2024, 9:47 IST
Last Updated 26 ಜೂನ್ 2024, 9:47 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭವನ್ನು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಖಂಡಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷಿಸಿದ್ದಾರೆ. ಆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಗೌರವಾರ್ಥವಾಗಿ ಮೌನಾಚರಿಸಿದ್ದು ಅದ್ಭುತ ಭಾವ ಮೂಡಿಸಿತು ಎಂದೂ ಹೇಳಿದ್ದಾರೆ.

ಲೋಕಸಭೆ ಸ್ಪೀಕರ್‌ ಆಗಿ ಸತತ ಎರಡನೇ ಅವಧಿಗೆ ಆಯ್ಕೆಯಾದ ಬಿರ್ಲಾ ಅವರು, ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವನ್ನು ಇಂದು (ಬುಧವಾರ) ಸದನದಲ್ಲಿ ಅಂಗೀಕರಿಸಿದರು. ಹಾಗೆಯೇ, ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆಯೂ ಆಡಳಿತ ಪಕ್ಷದ ಸಂಸದರು ಕೆಲಹೊತ್ತು ಮೌನಾಚರಿಸಿದರು.

ADVERTISEMENT

ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, 'ಗೌರವಾನ್ವಿತ ಸ್ಪೀಕರ್‌ ಅವರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದು ಸಂತೋಷವನ್ನುಂಟುಮಾಡಿತು. ಆ ಸಂದರ್ಭದ (ತುರ್ತು ಪರಿಸ್ಥಿತಿ) ಅತಿರೇಕದ ನಿರ್ಧಾರವನ್ನು ಎತ್ತಿ ತೋರಿಸಿದ ಸ್ಪೀಕರ್‌, ಅದರಿಂದ ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂಬುದನ್ನು ಉಲ್ಲೇಖಿಸಿದ್ದಾರೆ' ಎಂದು ಬರೆದಿದ್ದಾರೆ.

'50 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಆದರೂ ಅದರ ಬಗ್ಗೆ ಈಗಿನ ಯುವಕರು ತಿಳಿಯುವುದು ತುಂಬಾ ಮುಖ್ಯ. ಏಕೆಂದರೆ, ಸಂವಿಧಾನವನ್ನು ತುಳಿದುಹಾಕಿದಾಗ, ಜನರ ಅಭಿಪ್ರಾಯಗಳನ್ನು ಹತ್ತಿಕ್ಕಿದಾಗ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ನಾಶಪಡಿಸಿದಾಗ ಏನಾಗುತ್ತದೆ ಎಂಬುದಕ್ಕೆ ಅದೊಂದು ಸೂಕ್ತ ಉದಾಹರಣೆಯಾಗಿ ಉಳಿದಿದೆ' ಎಂದೂ ಹೇಳಿದ್ದಾರೆ.

'ತುರ್ತುಪರಿಸ್ಥಿತಿಯ ಸಂದರ್ಭವು ಸರ್ವಾಧಿಕಾರ ಹೇಗಿರುತ್ತದೆ' ಎಂಬುದಕ್ಕೆ ನಿದರ್ಶನವಾಗಿದೆ ಎಂದೂ ಹೇಳಿದ್ದಾರೆ.

ದಿವಂಗತ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ 1975ರ ಜೂನ್‌ 25ರಂದು ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿಕೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.