ADVERTISEMENT

ಕಳಸಾ-ಬಂಡೂರಿ ಡಿಪಿಆರ್‌ಗೆ ವಿರೋಧ : ಗೋವಾ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 15:40 IST
Last Updated 20 ಜನವರಿ 2023, 15:40 IST
ಪ್ರಮೋದ್‌ ಸಾವಂತ್
ಪ್ರಮೋದ್‌ ಸಾವಂತ್   

ಪಣಜಿ: ಮಹದಾಯಿ ಯೋಜನೆಯ (ಕಳಸಾ– ಬಂಡೂರಿ ನಾಲಾ ಯೋಜನೆ) ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿರುವುದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಮುಕ್ತಾಯಗೊಂಡ ರಾಜ್ಯ ವಿಧಾನಸಭೆಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸಲು ಸರ್ವಾನುಮತದಿಂದ ನಿರ್ಧರಿಸಿತು.

ಈ ವಿಷಯದ ಬಗ್ಗೆ ಆರು ಗಂಟೆಗಳ ಚರ್ಚೆಯ ನಂತರ ಗುರುವಾರ ತಡರಾತ್ರಿ ನಿರ್ಣಯವನ್ನು ಅಂಗೀಕರಿಸಲಾಯಿತು. ಪ್ರತಿಯೊಬ್ಬ ಸದಸ್ಯರು ಈ ವಿಷಯದ ಬಗ್ಗೆ ಮಾತನಾಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯೂರಿ ಅಲೆಮಾವೊ ಅವರು ಅಂತರರಾಜ್ಯ ನದಿ ನೀರು ಹಂಚಿಕೆ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರೆ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ನ್ಯಾಯಯುತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಬೇಕೆಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರ ಸರ್ಕಾರವು ಮಹದಾಯಿ ಸಮಸ್ಯೆಯನ್ನು ಅಸ್ತ್ರಗೊಳಿಸಿದೆ ಮತ್ತು ಈಗ ಅದನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ’ ಎಂದು ಅಲೆಮಾವೊ ಹೇಳಿದರು.

ಅಲೆಮಾವೊ ಅವರ ಹೇಳಿಕೆ ತಳ್ಳಿಹಾಕಿದ ಸಾವಂತ್, ನ್ಯಾಯಾಧಿಕರಣದ ತೀರ್ಪಿನ ನ್ಯಾಯಯುತ ಅನುಷ್ಠಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.