ಪಣಜಿ: ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ (63) ಅವರು ಭಾನುವಾರ ಸಂಜೆ 6.40ರ ಸುಮಾರಿನಲ್ಲಿ ಇಲ್ಲಿ ತಮ್ಮ ಮಗನ ನಿವಾಸದಲ್ಲಿ ನಿಧನರಾಗಿದ್ದಾರೆ.
ಒಂದು ವರ್ಷದಿಂದ ಕ್ಯಾನ್ಸರ್‌ನಿಂದ (ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್) ಬಳಲುತ್ತಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು. ಮೂಗಿನಲ್ಲಿ ನಳಿಕೆ ಇದ್ದಂತೆಯೇ ಗೋವಾ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಹಲವು ಯೋಜನೆಗಳನ್ನು ಉದ್ಘಾಟಿಸಿದ್ದರು.
ಶನಿವಾರ ಬೆಳಿಗ್ಗೆ ರಕ್ತದ ಒತ್ತಡದಲ್ಲಿ ಏರುಪೇರಾಗಿತ್ತು ಚಿಕಿತ್ಸೆ ನಂತರ, ಆರೋಗ್ಯ ಸ್ಥಿರವಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿತ್ತು.
ಆದರೆ ಶನಿವಾರ ರಾತ್ರಿ ಅವರ ಆರೋಗ್ಯ ಬಿಗಡಾಯಿಸಿತ್ತು. ಅವರಿಗೆ ಜೀವರಕ್ಷಕ ಸಾಧನಗಳ ನೆರವು ನೀಡಲಾಗಿತ್ತು. ನಂತರವೂ ಆರೋಗ್ಯ ಸುಧಾರಿಸಲಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಪರ‍್ರೀಕರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಇದೇ ಜನವರಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಪರ‍್ರೀಕ್ಕರ್ ಅವರು, ‘ಕೊನೆಯ ಉಸಿರು ಇರುವವರೆಗೂ ಗೋವಾದ ಸೇವೆ ಮಾಡುತ್ತೇನೆ’ ಎಂದಿದ್ದರು.
ಬಿಜೆಪಿ ಸಭೆ: ಮುಖ್ಯಮಂತ್ರಿ ಹುದ್ದೆಗೆ ಹೊಸ ಅಭ್ಯರ್ಥಿಯ ಆಯ್ಕೆಗಾಗಿ ಬಿಜೆಪಿ ನೇತೃತ್ವದ ಮೈತ್ರಿ ಪಕ್ಷಗಳುತಡ ರಾತ್ರಿ ಸಭೆ ಸೇರಿದವು.
2018ರ ಫೆ,14ರಂದು ಅನಾರೋಗ್ಯದಿಂದಾಗಿ ಜಿಎಂಸಿಎಚ್‌ಗೆ ದಾಖಲಾಗಿದ್ದರು. ಅಲ್ಲಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. 2018ರ ಮಾರ್ಚ್ 3ರಂದು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಅವರು, ಜೂನ್ 14ರಂದು ಹಿಂದಿರುಗಿದ್ದರು.ಮತ್ತೆ ಆಗಸ್ಟ್ 10ರಂದು ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದರು. ಆಗಸ್ಟ್ 22ರಂದು ಗೋವಾಗೆ ವಾಪಸ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
* ಇದನ್ನೂ ಓದಿ:ಮನೋಹರ್ ಪರ್ರೀಕರ್ ಬದುಕಿನ ಹಾದಿ...
ಸೆಪ್ಟೆಂಬರ್ 15ರಂದು ದೆಹಲಿಯ ಏಮ್ಸ್‌ನಲ್ಲಿ ಸುಮಾರು 1 ತಿಂಗಳು ಚಿಕಿತ್ಸೆ ಪಡೆದಿದ್ದರು. 2018ರ ಅಕ್ಟೋಬರ್ 14ರಂದು ಗೋವಾಗೆ ಮರಳಿ ಖಾಸಗಿ ನಿವಾಸದಿಂದಲೇ ರಾಜ್ಯದ ಆಡಳಿತ ನಡೆಸಿದ್ದರು.2019ರ ಜನವರಿ 2ರಂದು ಮುಖ್ಯಮಂತ್ರಿ ಕಚೇರಿಗೆ ಹಾಜರಾಗುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಜ.29ರಂದು ಬಜೆಟ್ ಅಧಿವೇಶದಲ್ಲಿ ಭಾಗಿಯಾಗಿ, ಜ.30ರಂದು ರಾಜ್ಯ ಬಜೆಟ್ ಮಂಡಿಸಿದ್ದರು.
ಬಿಜೆಪಿ ಪಾಳೆಯದಲ್ಲಿ ಬುದ್ದಿವಂತ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು.1955 ಡಿಸೆಂಬರ್ 13ರಂದು ಉತ್ತರ ಗೋವಾದ ಮಾಪುಸಾದಲ್ಲಿ ಜನಿಸಿದರು.ಮಡ್‌ಗಾಂವ್‌ನ ಯೊಯೊಲಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದು ಉನ್ನತ ವ್ಯಾಸಂಗಕ್ಕೆ ಮುಂಬೈಗೆ ತೆರಳಿದರು.1978ರಲ್ಲಿ ಬಾಂಬೆ ಐಐಟಿಯಿಂದ ಮೆಟಾಲರ್ಜಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.
ಶಾಲಾ ದಿನಗಳಲ್ಲೇ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದರು. 26ನೇ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ನ ಸಂಘಚಾಲಕನಾಗಿ ಆಯ್ಕೆಯಾಗಿದ್ದರು. ನಂತರರಾಮಜನ್ಮಭೂಮಿ ಚಳವಳಿಯಲ್ಲಿ ಭಾಗಿಯಾಗಿದ್ದರು.
1994ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಗೋವಾ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದರು.2000ನೇ ಫೆಬ್ರುವರಿ 24ರಂದು ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ನಂತರ 2002, 2012ರಲ್ಲಿಗೋವಾ ಮುಖ್ಯಮಂತ್ರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.