ಪಣಜಿ: ‘ಪ್ರವಾಸಿಗರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ರೀತಿಯ ಕೆಲಸಗಳಲ್ಲಿ ತೊಡಗಿರುವವರನ್ನು ಸುಮ್ಮನೆ ಬಿಡಲು ಆಗುವುದಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಗೋವಾ ವಿಮೋಚನಾ ದಿನದ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಮಹತ್ವದ ಕುರಿತು ಮಾತನಾಡಿದರು. ಪ್ರವಾಸೋದ್ಯಮದ ಭಾಗಿಯಾದ ಟ್ಯಾಕ್ಸಿ ಮತ್ತು ಪ್ರವಾಸ ನಿರ್ವಾಹಕರು ಈ ವಲಯದ ಬೆಳವಣಿಗೆಗೆ ಅಗತ್ಯ. ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮದಲ್ಲಿ ಗೋವಾವನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಗೋವಾ ಕುರಿತು ಸಕಾರಾತ್ಮಕ ಅಭಿಪ್ರಾಯ ಹುಟ್ಟುಹಾಕಲು ರಾಜ್ಯ ಸರ್ಕಾರವು ಪ್ರಯತ್ನಿಸುತ್ತಿದೆ. ಕರಾವಳಿ, ಒಳನಾಡು, ಪರಿಸರ ಸ್ನೇಹಿ ಪ್ರವಾಸೋದ್ಯಮ, ಆರೋಗ್ಯ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಗಳಂಥ ವಿವಿಧ ಮಜಲುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ ವಾರ ಅಮೆರಿಕದಿಂದ ಆಗಮಿಸಿದ್ದ ಪ್ರವಾಸಿಗರಿಗೆ ಟ್ಯಾಕ್ಸಿ ಚಾಲಕರು ತೊಂದರೆ ಉಂಟು ಮಾಡಿದ್ದರು. ಈ ಪ್ರಕರಣವನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನಾಡಿದರು.
ಸುವರ್ಣ ಗೋವಾ ಕನಸು ಶೀಘ್ರದಲ್ಲೇ ನನಸು
‘ಸುವರ್ಣ ಗೋವಾ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಹತ್ತಿರ ಬಂದಿದ್ದೇವೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗೋವಾ ವಿಮೋಚನಾ ದಿನದ ಭಾಷಣದಲ್ಲಿ ಹೇಳಿದರು.
ಈ ದಿನದ ಅಂಗವಾಗಿ ಜನರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ ಅವರು, ‘ಶತಮಾನಗಳ ವಸಾಹತುಶಾಹಿಯಿಂದ ಗೋವಾವನ್ನು ವಿಮೋಚನೆಗೊಳಿಸಲು ಆಪರೇಷನ್ ವಿಜಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಸಶಸ್ತ್ರ ಪಡೆಯ ಸೈನಿಕರಿಗೆ ಗೌರವ ಸಲ್ಲಿಸಿಸುತ್ತೇನೆ’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಗೋವಾ ವಿಮೋಚನೆ ಅಂಗವಾಗಿ ಜನರಿಗೆ ಶುಭ ಹಾರೈಸಿದ್ದಾರೆ.
1961ರಲ್ಲಿ ಭಾರತೀಯ ಸೇನೆಯು ಪೋರ್ಚುಗೀಸರನ್ನು ಸೋಲಿಸಿ ಅವರನ್ನು ಗೋವಾದಿಂದ ಹೊರಕಳಿಸಿದ್ದರ ಸ್ಮರಣಾರ್ಥವಾಗಿ ಪ್ರತಿವರ್ಷ ಡಿಸೆಂಬರ್ 19ರಂದು ಗೋವಾ ವಿಮೋಚನಾ ದಿವಸ ಎಂದು ಆಚರಿಸಲಾಗುತ್ತದೆ.
ಈ ಸಮಾರಂಭದಲ್ಲಿ ಪ್ರಮೋದ್ ಅವರುಸೇನಾ ಗೌರವವನ್ನು ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.