ಪಣಜಿ:ಮಹದಾಯಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ನಡೆಯುತ್ತಿರುವ ಕಾನೂನು ಮತ್ತು ರಾಜಕೀಯ ಹೋರಾಟದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ತಮ್ಮ ರಾಜ್ಯದ ಹಿತಾಸಕ್ತಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಗೋವಾದ ಪ್ರತಿಪಕ್ಷಗಳು ಗುರುವಾರ ವಾಗ್ದಾಳಿ ನಡೆಸಿವೆ.
ಮಹದಾಯಿ ಯೋಜನೆಯ (ಕಳಸಾ– ಬಂಡೂರಿ ನಾಲಾ ಯೋಜನೆ) ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ ಬೆನ್ನಲ್ಲೆ ಅಂತರ ರಾಜ್ಯ ನೀರು ಹಂಚಿಕೆ ವಿವಾದದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಾವಂತ್ ಸಮರ್ಥಿಸಿಕೊಂಡಿದ್ದಾರೆ.
‘ಮಹದಾಯಿ ನೀರಿಗಾಗಿ ಹೋರಾಟ ಮುಂದುವರಿಸಲಾಗುವುದು. ಡಿಪಿಆರ್ ಅನುಮೋದನೆ ಹೊರತಾಗಿಯೂ ಕರ್ನಾಟಕ ಮಹದಾಯಿ ನದಿ ನೀರನ್ನು ತಿರುಗಿಸಲು ಸಾಧ್ಯವಿಲ್ಲ. ಏಕೆಂದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಕಳಸಾ ನದಿ ನೀರನ್ನು ಯಾವುದೇ ರೀತಿಯಲ್ಲಿ ತಿರುಗಿಸಲು ಸಾಧ್ಯವಿಲ್ಲ’ ಎಂದು ಸಾವಂತ್ ಹೇಳಿದರು.
ಕಳಸಾ ನದಿಯಿಂದ ಯಾವುದೇ ನೀರನ್ನು ಅಕ್ರಮವಾಗಿ ತಿರುಗಿಸದಂತೆ ನೋಡಿಕೊಳ್ಳಲುಕೂಡಲೇ ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಾವಂತ್ ಅವರು ಬಿಜೆಪಿ ಆಡಳಿತವಿರುವ ಕರ್ನಾಟಕದ ಪರವಾಗಿ ಗೋವಾದ ಹಿತಾಸಕ್ತಿಯನ್ನು ಬಿಟ್ಟುಕೊಟ್ಟಿದ್ದಾರೆ ಎಂದುಮಾಜಿ ಉಪ ಮುಖ್ಯಮಂತ್ರಿ ಮತ್ತು ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
‘ಈ ವಿಷಯದ ಬಗ್ಗೆ ಸರ್ವಪಕ್ಷ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕು.ಅಧಿವೇಶನವನ್ನು ವಿಸ್ತರಿಸಿ, ಈ ವಿಷಯಕ್ಕಾಗಿ ಒಂದು ದಿನ ಮೀಸಲಿಡಬೇಕು’ ಎಂದುಗೋವಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯೂರಿ ಅಲೆಮಾವೊ ಒತ್ತಾಯಿಸಿದರು.
ಮಹದಾಯಿ ನದಿ ಪಾತ್ರದ ನೀರನ್ನು ಅಕ್ರಮವಾಗಿ ತಿರುಗಿಸಿದ್ದಕ್ಕಾಗಿ ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಇನ್ನೂ ಎರಡು ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.