ADVERTISEMENT

ಗೋವಾ ವಿಮೋಚನಾ ದಿನ: ₹600 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2021, 12:06 IST
Last Updated 19 ಡಿಸೆಂಬರ್ 2021, 12:06 IST
ಗೋವಾದಲ್ಲಿ ಪ್ರಧಾನಿ ನರೇಂದ್ರ ಮೋದಿ
ಗೋವಾದಲ್ಲಿ ಪ್ರಧಾನಿ ನರೇಂದ್ರ ಮೋದಿ   

ಪಣಜಿ: ಅಗೋಡಾ ಜೈಲು ವಸ್ತು ಸಂಗ್ರಹಾಲಯದ ನವೀಕರಣ ಸೇರಿದಂತೆ ಸುಮಾರು ₹600 ಕೋಟಿ ವೆಚ್ಚದ ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.

ಗೋವಾ ವಿಮೋಚನಾ ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌, ದಕ್ಷಿಣ ಗೋವಾ ಜಿಲ್ಲೆಯ ಹೊಸ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದ ಕೌಶಲಗಳ ಅಭಿವೃದ್ಧಿ ಕೇಂದ್ರ ಹಾಗೂ ಮ್ಯಾಂಗ್ರೊದ ದಬೋಲಿಂ–ನವೇಲಿಂನಲ್ಲಿ ಗ್ಯಾಸ್‌–ಇನ್‌ಸ್ಯುಲೇಟೆಡ್‌ ಸಬ್‌ಸ್ಟೇಷನ್‌ ಉದ್ಘಾಟಿಸಿದರು.

ಡಾ.ಶ್ಯಾಮ ಪ್ರಸಾದ್‌ ಮುಖರ್ಜಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ 'ಆಪರೇಷನ್‌ ವಿಜಯ್'ನಲ್ಲಿ ಭಾಗಿಯಾಗಿದ್ದ ಪ್ರಮುಖ ಹೋರಾಟಗಾರರನ್ನು ಪ್ರಧಾನಿ ಸನ್ಮಾನಿಸಿದರು.

ADVERTISEMENT

'ದೇಶದ ಹಲವು ಪ್ರಮುಖ ಪ್ರದೇಶಗಳು ಮೊಘಲರ ಆಳ್ವಿಕೆಗೆ ಒಳಗಾಗಿದ್ದ ಸಂದರ್ಭದಲ್ಲಿ ಗೋವಾ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಆದರೆ, ಶತಮಾನಗಳ ನಂತರವೂ ಗೋವಾ ತನ್ನ ಜನರನ್ನು ಮರೆತಿಲ್ಲ, ಭಾರತವೂ ಸಹ ತನ್ನ ಗೋವಾವನ್ನು ಮರೆತಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ಸಮಯದಲ್ಲಿ ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್‌ ಅವರನ್ನು ನೆನಪಿಸಿಕೊಂಡ ಪ್ರಧಾನಿ, 'ಗೋವಾದ ಜನರು ಎಷ್ಟು ಪ್ರಾಮಾಣಿಕರು, ಕ್ರಿಯಾಶೀಲರು ಹಾಗೂ ಪರಿಶ್ರಮಿಗಳು ಎಂಬುದನ್ನು ಪರ್‍ರೀಕರ್‌ ಅವರ ನಡೆತೆಯಿಂದ ಕಂಡಿರುವೆ. ವ್ಯಕ್ತಿಯೊಬ್ಬ ಹೇಗೆ ತನ್ನ ರಾಜ್ಯಕ್ಕೆ ಮತ್ತು ತನ್ನ ಜನರಿಗಾಗಿ ಕೊನೆಯ ಉಸಿರು ಇರುವವರೆಗೂ ಸಮರ್ಪಿತರಾಗಿ ಇರಬಹುದೆಂದು ಅವರ ಜೀವನದಿಂದ ಕಂಡಿರುವೆ' ಎಂದರು.

ಪಣಜಿಯಲ್ಲಿ ಹುತಾತ್ಮರ ಸ್ಮಾರಕಗಳಿಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಿದರು. ಸೇಲ್‌ ಪರೇಡ್‌ ಹಾಗೂ ಪ್ಲೈಪಾಸ್ಟ್‌ನಲ್ಲಿ (ವೈಮಾನಿಕ ಪ್ರದರ್ಶನ) ಭಾಗಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.