ADVERTISEMENT

ಮಹಿಳೆಗೆ ಬೆದರಿಕೆ: ಗೋವಾ ಪೊಲೀಸರಿಂದ ಬೆಂಗಳೂರು ವ್ಯಕ್ತಿ ಬಂಧನ

ಪಿಟಿಐ
Published 19 ಮೇ 2024, 11:28 IST
Last Updated 19 ಮೇ 2024, 11:28 IST
.
.   

ಪಣಜಿ : ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗ ಜಾಹೀರಾತು ಪೋಸ್ಟ್‌ ಮಾಡಿದ ಮತ್ತು ಮಹಿಳೆಯನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪದ ಮೇಲೆ ಗೋವಾ ಸೈಬರ್‌ ಕ್ರೈಂ ಪೊಲೀಸರು ಬೆಂಗಳೂರು ಮೂಲದ ವಿ. ಮೋಹನ್‌ ರಾಜ್‌ (29) ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.

ಗೋವಾ ಮೂಲದ ಮಹಿಳೆ ಈ ಸಂಬಂಧ ದೂರು ದಾಖಲಿಸಿದ್ದಾರೆ. ಆರೋಪಿಯು ವಿದೇಶಿ ಬ್ಯಾಂಕಿನಲ್ಲಿ ಖಾಲಿ ಹುದ್ದೆಗಾಗಿ ನಕಲಿ ಉದ್ಯೋಗ ಜಾಹೀರಾತು ಪ್ರಕಟಿಸಿ, ಚಾಟಿಂಗ್‌ ಆ್ಯಪ್‌ ಮೂಲಕ ತನ್ನನ್ನು ಸಂಪರ್ಕಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. 

‘ಆರೋಪಿಯು ವಿಡಿಯೊ ಕರೆ ಮೂಲಕ ಆನ್‌ಲೈನ್‌ ಸಂದರ್ಶನ ನಡೆಸಿದ್ದ. ಈ ವೇಳೆ ಕೆಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಅವರನ್ನು ಕಂಪನಿಯ ಪ್ರತಿನಿಧಿಗಳು ಎಂದು ಆತ ಪರಿಚಯಿಸಿದ್ದ. ನಂತರ ವಿವಸ್ತ್ರಗೊಳ್ಳುವಂತೆ ಒತ್ತಾಯಿಸಿ, ಆ ಕುರಿತು ವಿಡಿಯೊ ರೆಕಾರ್ಡ್‌ ಮಾಡಿ, ಸ್ಕ್ರೀನ್‌ಶಾಟ್‌ಗಳನ್ನು ಅವರು ತೆಗೆದುಕೊಂಡರು’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್‌ ವಕ್ತಾರರು ಹೇಳಿದ್ದಾರೆ.

ADVERTISEMENT

‘ಬಳಿಕ ಆರೋಪಿ ಮಹಿಳೆಯನ್ನು ಬ್ಲ್ಯಾಕ್‌ಮೇಲ್‌ ಮಾಡಲು ಪ್ರಾರಂಭಿಸಿದ. ಆರೋಪಿಯು ಎರಡು ತಿಂಗಳಿಂದ ಕಿರುಕುಳ ನೀಡುತ್ತಿದ್ದು, ಬೆಂಗಳೂರಿಗೆ ಬಂದು ಭೇಟಿಯಾಗಲು ಒತ್ತಾಯಿಸುತ್ತಿದ್ದಾನೆ. ಇಲ್ಲದಿದ್ದರೆ ವಿಡಿಯೊ, ಫೋಟೊಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾನೆ’ ಎಂದು ಮಹಿಳೆ ಆರೋಪಿಸಿದ್ದಾರೆ. 

ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಗುಪ್ತಾ ಅವರ ನೇತೃತ್ವದ ತಂಡ ಸಂತ್ರಸ್ತೆಯೊಂದಿಗೆ ಬೆಂಗಳೂರಿಗೆ ಬಂದು, ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದೆ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಆರೋಪಿಯ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದ್ದು, ಸೈಬರ್‌ ಫೋರೆನ್ಸಿಕ್‌ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.