ಪಣಣಿ: ಹರಿಯಾಣ ಬಿಜೆಪಿ ನಾಯಕಿ ಹಾಗೂ ಟಿಕ್‌ಟಾಕ್ ಸ್ಟಾರ್ ಸೋನಾಲಿ ಪೋಗಟ್ (42) ಅವರ ಸಾವಿನ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಮಂಗಳವಾರ ಉತ್ತರ ಗೋವಾದ ಸೇಂಟ್ ಆಂಟೋನಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸೋನಾಲಿ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿಗಳು ಹೇಳಿದ್ದವು.
ಸೋನಾಲಿ ಸಾವಿನ ಬಗ್ಗೆ ಹರಿಯಾಣದ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿರುವ ಬೆನ್ನಲ್ಲೇ ಗೋವಾ ಸಿಎಂ ನಾವೇ ವಿಶೇಷ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಬುಧವಾರ ಸೋನಾಲಿ ಅವರ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ಅವರ ಕುಟುಂಬದವರು ಗೋವಾಕ್ಕೆ ಬಂದಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಆಗಸ್ಟ್ 22ಕ್ಕೆ ಗೋವಾ ಪ್ರವಾಸಕ್ಕೆ ಬಂದಿದ್ದ ಸೋನಾಲಿ, ಮಂಗಳವಾರ ಬೆಳಿಗ್ಗೆ ಹೋಟೆಲ್ ಒಂದರಿಂದ ಆಸ್ಪತ್ರೆಗೆ ಹೋದಾಗ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ಈಗಾಗಲೇ ‘ಅನುಮಾನಾಸ್ಪದ ಸಾವು’ ಪ್ರಕರಣವನ್ನು ಗೋವಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಸೊನಾಲಿ ಅವರು 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‌ದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಭಾರಿ ಸದ್ದು ಮಾಡಿದ್ದರು.
ಟಿಕ್ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೊನಾಲಿ ಫೋಗಟ್, 14ನೇ ಆವೃತ್ತಿಯ ‘ಬಿಗ್‌ಬಾಸ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.