ADVERTISEMENT

ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು: ಪಿ.ಚಿದಂಬರಂ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 7:28 IST
Last Updated 3 ಡಿಸೆಂಬರ್ 2019, 7:28 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ಭವಿಷ್ಯದಲ್ಲಿ ಆರ್ಥಿಕ ಸೂಚಕವಾಗಿ ಜಿಡಿಪಿಯನ್ನು ಪರಿಗಣಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ಹೇಳಿದ ಬೆನ್ನಲ್ಲೇ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಬಿಜೆಪಿಯ ಆರ್ಥಿಕ ಸುಧಾರಣೆಯ ಕ್ರಮಗಳನ್ನು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕುಸಿಯುತ್ತಿರುವ ಭಾರತದ ಆರ್ಥಿಕತೆಯನ್ನು ಸುಧಾರಿಸಲು ಬಿಜೆಪಿಯ ಬಳಿಯಿರುವ ಯೋಜನೆಗಳನ್ನು ಟೀಕಿಸಿದ್ದು, ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು ಎಂದು ಹೇಳಿದ್ದಾರೆ.

ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ನ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ 4.5ಕ್ಕೆ ಕುಸಿದಿರುವುದನ್ನು ಸರ್ಕಾರಿ ದಾಖಲೆಗಳೇ ಬಹಿರಂಗಪಡಿಸಿತ್ತು. ಅದಾದಮೂರು ದಿನಗಳ ಬಳಿಕ ಬಿಜೆಪಿಯ ನಿಶಿಕಾಂತ್ ದುಬೆ ಅವರು ಸಂಸತ್ತಿನಲ್ಲಿ ಮಾತನಾಡಿ, ಜಿಡಿಪಿಯು ಶೀಘ್ರದಲ್ಲೇ ಅಪ್ರಪ್ರಸ್ತುತವಾಗುತ್ತದೆ. ಆರ್ಥಿಕ ಸೂಚಕವಾಗಿ ಜಿಡಿಪಿಯು 1934ರ ಮುನ್ನ ಇರಲಿಲ್ಲ. ಅಲ್ಲದೆ ಜಿಡಿಪಿಯನ್ನು ಪರಮಸತ್ಯ ಎಂದು ಪರಿಗಣಿಸುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದರು.

ADVERTISEMENT

ಐಎನ್‌ಎಕ್ಸ್ ‌ಮೀಡಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಚಿದಂಬರಂ, ಜಿಡಿಪಿ ಮಾನದಂಡ ಅಪ್ರಸ್ತುತ, ವೈಯಕ್ತಿಕ ತೆರಿಗೆ ಇಳಿಸುವುದು, ಆಮದು ಸುಂಕವನ್ನು ಹೆಚ್ಚಿಸುವುದೇ ಆರ್ಥಿಕತೆಯನ್ನು ಸುಧಾರಿಸಲು ಬಿಜೆಪಿ ಬಳಿಯಲ್ಲಿರುವ ಕಲ್ಪನೆಗಳು. ಭಾರತದ ಆರ್ಥಿಕತೆಯನ್ನು ದೇವರೇ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನಿಶಿಕಾಂತ್ ದುಬೆ ಅವರ ಹೇಳಿಕೆಯನ್ನು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಕೂಡ ಟೀಕಿಸಿದ್ದು, ನವಭಾರತದ ಇಂತ ಅನನುಭವಿ ಅರ್ಥ ಶಾಸ್ತ್ರಜ್ಞರಿಂದ ನಮ್ಮನ್ನುದೇವರೇ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.