ಯಮುನಾನಗರ: ಅರವಿಂದ ಕೇಜ್ರಿವಾಲ್ ಅವರು ದೇವರ ಆಶೀರ್ವಾದ ಪಡೆದವರು ಮತ್ತು ದೊಡ್ಡ ಸಾಧನೆಯನ್ನು ಮಾಡಲು ಜನಿಸಿದವರು ಎಂದು ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.
ಯಮುನಾನಗರದ ಸಧೌರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಜ್ರಿವಾಲ್ 1968 ಆಗಸ್ಟ್ 16ರಂದು ಜನಿಸಿದರು. ಆ ದಿನ ಕೃಷ್ಣ ಜನ್ಮಾಷ್ಟಮಿ ಆಗಿತ್ತು. ಇದು ಕಾಕತಾಳೀಯವಲ್ಲ. ದೇವರು ಅವರ ಮೂಲಕ ಏನನ್ನಾದರೂ ಒಳಿತು ಮಾಡಲು ಬಯಸುತ್ತಿದ್ದಾನೆ ಎಂದು ನಾನು ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ.
ವರ್ಷದ ಕೊನೆಯಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದೂ ಸ್ಥಾನವನ್ನು ನೀಡದಂತೆ ಜನರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಶಾಲೆಗಳ ಸ್ಥಿತಿ ಸುಧಾರಿಸಬೇಕೆಂದರೆ ಅದು ಆಮ್ ಆದ್ಮಿ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿಯಿಂದ ಅಲ್ಲ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಸುಳ್ಳು ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದೆ ಎಂದು ಅವರು ಆರೋಪಿಸಿದ್ದಾರೆ.
‘ಮೋದಿ ಅವರು ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿಲ್ಲ. ಹರಿಯಾಣದ ಮಗನನ್ನು ಜೈಲಿಗೆ ಹಾಕಿದ್ದಾರೆ. ನಾನು ಹರಿಯಾಣದ ಸೊಸೆಯಾಗಿ ನಿಮ್ಮನ್ನು ಕೇಳಲು ಬಯಸುತ್ತೇನೆ, ನೀವು ಈ ಅವಮಾನವನ್ನು ಸಹಿಸಿಕೊಳ್ಳುತ್ತೀರಾ?, ಇದನ್ನು ಸಹಿಸಿಕೊಂಡು ಶಾಂತವಾಗಿ ಕುಳಿತುಕೊಳ್ಳುತ್ತೀರಾ? ಎಂದು ಜನರನ್ನು ಪ್ರಶ್ನಿಸಿದ್ದಾರೆ. ನಿಮ್ಮ ಕೇಜ್ರಿವಾಲ್ ಸಿಂಹ, ಅವರು ಮೋದಿ ಅವರ ಮುಂದೆ ಬಾಗುವುದಿಲ್ಲ. ಇದು ಕೇಜ್ರಿವಾಲ್ ಅವರ ಗೌರವದ ವಿಷಯವಲ್ಲ. ಹರಿಯಾಣದ ಗೌರವದ ಪ್ರಶ್ನೆಯಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.