ನವದೆಹಲಿ: ಕಾಳಿ ಮಾತೆ ಪೋಸ್ಟರ್ ವಿವಾದದಲ್ಲಿ ಚಿತ್ರ ನಿರ್ದೇಶಕಿ ಲೀನಾ ಮಣಿಮೇಗಲೈ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಿರುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆ.
‘ಕಾಳಿ’ ಸಾಕ್ಷ್ಯಚಿತ್ರದಲ್ಲಿ ಕಾಳಿ ಮಾತೆಯು ಎಲ್‌ಜಿಬಿಟಿಕ್ಯೂ ಧ್ವಜ ಹಿಡಿದು ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸಿರುವ ಕಾರಣಕ್ಕೆ ಮಣಿಮೇಗಲೈ ಅವರು ವಿವಾದಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ.
ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ, ರದ್ದುಗೊಳಿಸುವಂತೆ ಕೋರಿ ಮಣಿಮೇಗಲೈ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಲೀನಾ ಅವರ ಮನವಿಯನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು.
ಮಣಿಮೇಗಲೈ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿರುವುದನ್ನೂ ಗಮನಿಸಿರುವುದಾಗಿ ನ್ಯಾಯಾಲಯ ಹೇಳಿತು.
‘ಅರ್ಜಿದಾರರ ವಿರುದ್ಧ ದಾಖಲಾದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳಬಾರದು. ಈ ಹಂತದಲ್ಲಿ, ಅನೇಕ ಪ್ರಕರಣಗಳಡಿ ಎಫ್‌ಐಆರ್‌ಗಳನ್ನು ದಾಖಲಿಸುವುದು ಗಂಭೀರ ಪೂರ್ವಾಗ್ರಹ ಎನಿಸಿಕೊಳ್ಳಬಹುದು. ಕಾನೂನಿಗೆ ಅನುಸಾರವಾಗಿ ಎಲ್ಲಾ ಎಫ್‌ಐಆರ್‌ಗಳನ್ನು ಒಂದೇ ಸ್ಥಳದಲ್ಲಿ ಕ್ರೋಢೀಕರಿಸಲು ನೋಟಿಸ್ ನೀಡುತ್ತೇವೆ’ ಎಂದು ಪೀಠ ಹೇಳಿತು.
ಮಣಿಮೇಗಲೈ ಪರ ವಾದ ಮಂಡಿಸಿದ ವಕೀಲೆ ಕಾಮಿನಿ ಜೈಸ್ವಾಲ್, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಅವರಿಗಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳ ಕ್ರಿಮಿನಲ್ ಮೊಕದ್ದಮೆಗಳಿಗೆ ತಡೆಯಾಜ್ಞೆ ನೀಡುವಂತೆಯೂ ಮಣಿಮೇಗಲೈ ಅವರು ಕೋರಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.