ADVERTISEMENT

ಗೋಧ್ರಾ ನೀಟ್‌ ಹಗರಣ: ದೊಡ್ಡ ಪಿತೂರಿಯ ಸಾಧ್ಯತೆ

ನಾಲ್ವರು ಆರೋಪಿಗಳ ಕಸ್ಟಡಿಗೆ ಕೋರಿದ ಸಿಬಿಐ * ಆರೋಪಿಗಳಿಗೆ ಅಂತರರಾಜ್ಯ ಸಂಪರ್ಕ

ಪಿಟಿಐ
Published 29 ಜೂನ್ 2024, 0:20 IST
Last Updated 29 ಜೂನ್ 2024, 0:20 IST
ನೀಟ್‌
ನೀಟ್‌   

ಅಹಮದಾಬಾದ್‌: ‘ನೀಟ್‌– ಯುಜಿ’ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಗೋಧ್ರಾದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳನ್ನು ವಿಚಾರಣೆ ಸಲುವಾಗಿ ತನ್ನ ಕಸ್ಟಡಿಗೆ ನೀಡುವಂತೆ ಕೋರಿರುವ ಸಿಬಿಐ, ಈ ಆರೋಪಿಗಳು ಅಂತರರಾಜ್ಯ ಸಂಪರ್ಕಗಳನ್ನು ಹೊಂದಿದ್ದು, ದೊಡ್ಡ ಮಟ್ಟದ ಪಿತೂರಿಯಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಗೋಧ್ರಾದಲ್ಲಿ ನಡೆದಿರುವ ಬಹುಕೋಟಿ ವಂಚನೆ ಪ್ರಕರಣದ ಜತೆಗೆ ಬಿಹಾರ, ರಾಜಸ್ಥಾನ, ದೆಹಲಿ, ಜಾರ್ಖಂಡ್‌ ರಾಜ್ಯಗಳಲ್ಲಿ ದಾಖಲಾಗಿರುವ ಪರೀಕ್ಷಾ ಅಕ್ರಮಗಳ ಪ್ರಕರಣದ ತನಿಖೆಯನ್ನೂ ಚುರುಕುಗೊಳಿಸಿರುವ ಸಿಬಿಐ, ಗೋಧ್ರಾ ಪ್ರಕರಣದ ಆರೋಪಿಗಳು ವ್ಯಾಪಕವಾದ ಜಾಲವನ್ನು ಹೊಂದಿರುವಂತಿದೆ ಎಂದು ಹೇಳಿದೆ.

ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಧ್ರಾ ಪೊಲೀಸರು ಐವರನ್ನು ಬಂಧಿಸಿದ್ದು, ಕೆಲ ಅಭ್ಯರ್ಥಿಗಳ ಪೋಷಕರು ನೀಡಿರುವ ₹2.3 ಕೋಟಿ ಮೊತ್ತದ ನಗದು ಮತ್ತು ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಗೋಧ್ರಾದ ಜೈಲಿನಲ್ಲಿರುವ ಆರೋಪಿಗಳಾದ ಭೌತವಿಜ್ಞಾನ ಶಿಕ್ಷಕ ತುಷಾರ್‌ ಭಟ್‌ (ಪರೀಕ್ಷಾ ಕೇಂದ್ರದ ಉಪ ಅಧೀಕ್ಷಕ), ಜಯ ಜಲರಾಮ್‌ ಶಾಲೆಯ ಪ್ರಾಂಶುಪಾಲ ಪುರುಷೋತ್ತಮ್‌ ಶರ್ಮಾ (ನಗರ ಪರೀಕ್ಷಾ ಸಂಯೋಜಕ), ಮಧ್ಯವರ್ತಿಗಳಾದ ವಿಭೋರ್‌ ಆನಂದ್‌ ಮತ್ತು ಆರಿಫ್‌ ವೋಹ್ರಾ ಅವರನ್ನು ಕಸ್ಟಡಿಗೆ ನೀಡುವಂತೆ ಸಿಬಿಐ ನ್ಯಾಯಾಲಯವನ್ನು ಕೋರಿದೆ. ಆದರೆ ಮತ್ತೊಬ್ಬ ಆರೋಪಿ, ಶಿಕ್ಷಣ ಸಲಹೆಗಾರ ಪರಶುರಾಮ್‌ ರಾಯ್‌ ಅವರನ್ನು ಅದು ಕಸ್ಟಡಿಗೆ ಕೋರಿಲ್ಲ.

ನಿರ್ದಿಷ್ಟ ಪರೀಕ್ಷಾ ಕೇಂದ್ರ ಆಯ್ಕೆಗೆ ಸೂಚನೆ:

ಸಿಬಿಐನ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಗೋಧ್ರಾದಲ್ಲಿನ ಜಯ ಬಲರಾಮ್‌ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಲು ಕೆಲ ಅಭ್ಯರ್ಥಿಗಳಿಗೆ ಸೂಚಿಸಿದ್ದರು. ಅಲ್ಲದೆ ಗುಜರಾತಿಯನ್ನು ಆದ್ಯತೆಯ ಭಾಷೆಯನ್ನಾಗಿ ಆಯ್ಕೆ ಮಾಡಲು ಹೇಳಿದ್ದರು. ಕಳೆದ ವರ್ಷ ಅದೇ ಶಾಲೆಯಲ್ಲಿ ‘ನೀಟ್‌’ ಪರೀಕ್ಷೆ ನಡೆದಿದ್ದಾಗ, ಒಎಂಆರ್‌ ಶೀಟ್‌ಗಳನ್ನು ರವಾನಿಸುವುದಕ್ಕೂ ಮುನ್ನಾ ರಾತ್ರಿಯಿಡೀ ಅಲ್ಲಿಯೇ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಆರೋಪಿಗಳಾದ ಭಟ್‌, ಶರ್ಮಾ ಮತ್ತು ಇತರರಿಗೆ ತಿಳಿದಿತ್ತು. ಹೀಗಾಗಿಯೇ ಅವರು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಕೆಲ ಅಭ್ಯರ್ಥಿಗಳಿಗೆ ಇದೇ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದರು ಎಂದು ಸಿಬಿಐ ಪರ ವಕೀಲ ಧ್ರುವ ಮಲಿಕ್‌ ನ್ಯಾಯಾಲಯಕ್ಕೆ ವಿವರಿಸಿದರು.

ಅಭ್ಯರ್ಥಿಗಳು ಗೋಧ್ರಾ ತಲುಪಿದ ಬಳಿಕ, ಅವರಿಗೆ ಮತ್ತು ಅವರ ಪೋಷಕರಿಗೆ ಈ ಆರೋಪಿಗಳು ತಮ್ಮ ಯೋಜನೆಯನ್ನು ವಿವರಿಸಿದ್ದರು ಎಂದು ಅವರು ಹೇಳಿದರು.

ವಿಳಾಸ ಬದಲಿಸಲು ವ್ಯವಸ್ಥೆ:

ಬಿಹಾರ, ಜಾರ್ಖಂಡ್‌, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಒಡಿಶಾದ ಕೆಲ ಅಭ್ಯರ್ಥಿಗಳ ಹಾಲಿ ಮತ್ತು ಶಾಶ್ವತ ವಿಳಾಸವನ್ನು ಪಂಚಮಹಲ್‌ ಮತ್ತು ವಡೋದರಾ ಜಿಲ್ಲಾ ವ್ಯಾಪ್ತಿಗೆ ಸೇರಿದವರೆಂದು ಬದಲಿಸಲು ಆರೋಪಿಗಳು ವ್ಯವಸ್ಥೆ ಮಾಡಿದ್ದಾರೆ. ಈ ಆರೋಪಿಗಳು ಇತರ ರಾಜ್ಯಗಳಲ್ಲಿನ ತಮ್ಮ ವಿವಿಧ ಸಂಪರ್ಕಗಳನ್ನು ಬಳಸಿ ಈ ಪಿತೂರಿ ಮಾಡಿದ್ದಾರೆ ಎಂದು ಸಿಬಿಐ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ವ್ಯಾಪಿಸಿರುವ ಈ ಹಗರಣದ ಕುರಿತು ಸಿಬಿಐ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದೆ. ರಾಷ್ಟ್ರಮಟ್ಟದಲ್ಲಿ ನಡೆದಿರುವ ಅಕ್ರಮಗಳ ದೊಡ್ಡ ಪಿತೂರಿಯನ್ನು ಬಹಿರಂಗಪಡಿಸಲು, ಜಾಲವನ್ನು ಭೇದಿಸಲು ಈ ಆರೋಪಿಗಳನ್ನು ವಶಕ್ಕೆ ಪಡೆಯುವ ಅಗತ್ಯವಿದೆ ಎಂದು ಸಿಬಿಐ ಕೋರಿದೆ.

ಪರೀಕ್ಷೆಗೆ ಹಾಜರಾಗಿರುವ 23 ಲಕ್ಷ ಅಭ್ಯರ್ಥಿಗಳ ಭವಿಷ್ಯ ಹಾಗೂ ತನಿಖೆಯ ಬಗ್ಗೆ ಸರ್ಕಾರವು ಜುಲೈ 8ರಂದು ಸುಪ್ರೀಂ ಕೋರ್ಟ್‌ಗೆ ಉತ್ತರಿಸಬೇಕಿರುವ ಕಾರಣ ತನಿಖೆಯನ್ನು ತೀವ್ರಗೊಳಿಸಬೇಕಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಈ ಕುರಿತು ನ್ಯಾಯಾಲಯವು ಶನಿವಾರ ಆದೇಶ ಪ್ರಕಟಿಸುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.