ಅಹಮದಾಬಾದ್: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತಿಬ್ಬರಿಗೆ ಎಸ್‌ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ ತಪ್ಪಿತಸ್ಥರ ಸಂಖ್ಯೆ 33ಕ್ಕೆ ಏರಿದೆ.
ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದ ಆರೋಪ ಸಬೀತಾದ ಕಾರಣಫಾರೂಕ್ ಭಾನಾ ಮತ್ತು ಇಮ್ರಾನ್ ಶೇರು ಅವರನ್ನು ತಪ್ಪಿತಸ್ಥರು ಎಂದು ನ್ಯಾಯಮೂರ್ತಿ ಎಚ್.ವಿ. ವೋರಾ ತೀರ್ಪು ನೀಡಿದರು.
ಆರೋಪಿಗಳಾದ ಹುಸೇನ್ ಸುಲೇಮಾನ್ ಮೋಹನ್, ಕಸಮ್ ಭಮೇದಿ ಮತ್ತು ಫರುಕ್ ಧಂತಿಯಾ ಎಂಬುವರನ್ನು ಖುಲಾಸೆ ಮಾಡಲಾಗಿದೆ. ಈ ಐವರನ್ನು 2015ರಲ್ಲಿ ಬಂಧಿಸಲಾಗಿತ್ತು. ಸಾಬರಮತಿ ಕೇಂದ್ರೀಯ ಕಾರಾಗೃಹದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಲಾಗಿತ್ತು.
ಆರೋಪಿಗಳಾದ ಧಂತಿಯಾ ಮತ್ತು ಭಾನಾರನ್ನು ಗೋಧ್ರಾದಲ್ಲಿ,ಮಧ್ಯಪ್ರದೇಶದಲ್ಲಿ ಮೋಹನ್, ಗುಜರಾತಿನಲ್ಲಿ ಭಮೇದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ಎಂಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
27 ಫೆಬ್ರುವರಿ 2002ರಂದು ರೈಲಿಗೆ ಬೆಂಕಿ ಹಚ್ಚಿದ್ದರಿಂದ 59 ಮಂದಿ ಕರಸೇವಕರು ಸಜೀವ ದಹನವಾಗಿದ್ದರು. ಇದು ಗುಜರಾತ್ ಇತಿಹಾಸದಲ್ಲಿ ಭೀಕರ ಕೋಮುಗಲಭೆಗೆ ಕಾರಣವಾಗಿತ್ತು. ಅಲ್ಪಸಂಖ್ಯಾತಕ್ಕೆ ಸೇರಿದ ಸಾವಿರ ಮಂದಿ ಬಲಿಯಾಗಿದ್ದರು.
ಅಂಕಿ–ಅಂಶ
31 ಆರೋಪಿಗಳು-ಮಾರ್ಚ್ 2011ರಲ್ಲಿದೋಷಿಗಳೆಂದು ಕೋರ್ಟ್ ತೀರ್ಪು
11 ಮಂದಿ- ಮರಣದಂಡನೆ
20 ಮಂದಿ- ಜೀವಾವಧಿ ಶಿಕ್ಷೆ ನಿಗದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.