ಜೋಧ್‌ಪುರ: ‘ಗುರುಕುಲ’ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, 2018ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ, ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ, ತಿದ್ದಿದ ಆರ್‌ಟಿಐ ಉತ್ತರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಆರೋಪ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ.
ಅಸಾರಾಂ ಅವರಿಗೆ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರಿದ್ದ ಹೈಕೋರ್ಟ್‌ನ ಜೋಧ್‌ಪುರ ಪೀಠ ಜಾಮೀನು ನೀಡಿದೆ. ‘ತಿದ್ದಿರುವ ಆರ್‌ಟಿಐ ಉತ್ತರದ ದಾಖಲೆಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ನೇರ ಪಾತ್ರವಿಲ್ಲ. ಅಲ್ಲದೆ, ಸಹ ಆರೋಪಿ ರವಿರೈ ಮಾರ್ವಾಗೆ ಈಗಾಗಲೇ ಜಾಮೀನು ನೀಡಲಾಗಿದೆ. ವಿಚಾರಣೆ ದೀರ್ಘ ಕಾಲ ನಡೆಯುವ ಸಾಧ್ಯತೆ ಇದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಸಾರಾಂ ಆರೋಗ್ಯ ಸ್ಥಿತಿಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಪಡೆದ ಉತ್ತರವನ್ನು ತಿದ್ದಿ, ಆ ದಾಖಲೆಯನ್ನು ಅಸಾರಾಂಗೆ ಜಾಮೀನು ಪಡೆಯುವ ಸಲುವಾಗಿ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಸಂಬಂಧ ಅಸಾರಾಂ ಮತ್ತು ರವಿರೈ ಮಾರ್ವಾ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಸಾರಾಂ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ದಾಖಲೆಯನ್ನು ಜೋಧ್‌ಪುರ ಕಾರಾಗೃಹದಿಂದ ಆರ್‌ಟಿಐ ಅರ್ಜಿ ಅಡಿ ಗಣೇಶ್ ಕುಮಾರ್ ಪಡೆದು, ಅದನ್ನು ರವಿರೈಗೆ ನೀಡಿದ್ದರು. ಬಳಿಕ ಅದನ್ನು ರವಿರೈ ಅಸಾರಾಂ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.