ನವದೆಹಲಿ: ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂಬ ಬಿಜೆಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಗೆ ನೊಬೆಲ್‌ಪುರಸ್ಕೃತ,ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಟ್ವೀಟ್ ಮೂಲಕತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಾಧ್ವಿಯಂಥವರು ಗಾಂಧಿಯವರ ಆತ್ಮವನ್ನೇ ಕೊಲ್ಲುತ್ತಿದ್ದಾರೆ,’ ಎಂದು ಅವರು ಗುಡುಗಿದ್ದಾರೆ.
‘ಗೋಡ್ಸೆ ಗಾಂಧೀಜಿಯ ದೇಹವನ್ನಷ್ಟೇ ಕೊಂದ. ಆದರೆ, ಪ್ರಜ್ಞಾ ಸಿಂಗ್ ಠಾಕೂರ್ ಅಂಥವರು ಅವರ ಆತ್ಮದ ಜತೆಗೆ ಅಹಿಂಸೆ, ಶಾಂತಿ, ಸಹಿಷ್ಣುತೆ ಮತ್ತು ಭಾರತದ ಆತ್ಮವನ್ನು ಕೊಲ್ಲುತ್ತಿದ್ದಾರೆ. ಗಾಂಧೀಜಿ ಅವರು ಪಕ್ಷ, ರಾಜಕೀಯವನ್ನು ಮೀರಿದವರು. ಕ್ಷಣಿಕ ಲಾಭದ ಬಯಕೆಯನ್ನು ಬಿಜೆಪಿ ಮೊದಲು ಬಿಡಬೇಕು. ಗೋಡ್ಸೆ ಬೆಂಬಲಿತ ಮನಸ್ಥಿತಿಗಳನ್ನು ಪಕ್ಷದಿಂದ ಹೊರ ಹಾಕುವ ಮೂಲಕ ರಾಜಧರ್ಮ ಪಾಲನೆ ಮಾಡಬೇಕು,’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯೇ ಮೊದಲ ಭಯೋತ್ಪಾದಕ’ ಎಂಬ ನಟ, ರಾಜಕಾರಣಿ ಕಮಲ್ ಹಾಸನ್ ಅವರ ಹೇಳಿಕೆಗೆ ತಿರುಗೇಟು ನೀಡಲು ಹೋಗಿ ಭೋಪಾಲದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್, ‘ಗೋಡ್ಸೆ ಒಬ್ಬ ದೇಶ ಭಕ್ತನಾಗಿದ್ದ. ದೇಶಭಕ್ತನಾಗಿಯೇ ಉಳಿಯಲಿದ್ದಾನೆ,’ ಎಂದು ಹೇಳಿದ್ದರು.
ಸಾಧ್ವಿ ಈ ಹೇಳಿಕೆ ನೀಡುತ್ತಲೇ ಟ್ವೀಟ್ ಮಾಡಿದ್ದ ಕೇದ್ರ ಸಚಿವ ಅನಂತ್‌ಕುಮಾರ್ ಅವರು, ಬದಲಾದ ಪೀಳಿಗೆ ಗೋಡ್ಸೆ ಅವರ ಕುರಿತು ಚರ್ಚಿಸುತ್ತಿರುವುದು ಖುಷಿಯಾಗಿದೆ. ಚರ್ಚೆಯಿಂದ ನಾಥುರಾಂ ಗೋಡ್ಸೆಗೆ ಖುಷಿಯಾಗಿರಬಹುದು ಎಂದಿದ್ದರು. ಹೀಗಿರುವಾಗಲೇ ದಕ್ಷಿಣ ಕನ್ನಡದ ಸಂಸಂದ ನಳೀನ್ ಕುಮಾರ್ ಕಟೀಲ್ ‘ ಗೋಡ್ಸೆ ಕೊಂದಿದ್ದು ಒಬ್ಬರನ್ನು. ಕಸಬ್ ಕೊಂದಿದ್ದು 72 ಮಂದಿಯನ್ನು, ರಾಜೀವ್ ಗಾಂಧಿ ಕೊಂದದ್ದು 12000 ಜನರನ್ನು. ಯಾರು ಅತಿ ಕ್ರೂರಿ?’ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಸಂಗತಿ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.
ಇದೇ ಹಿನ್ನೆಲೆಯಲ್ಲೇ ಕೈಲಾಶ್ ಸತ್ಯಾರ್ಥಿಯವರು ಟ್ವೀಟ್ ಮಾಡಿ, ಗೋಡ್ಸೆ ಬೆಂಬಲಿತ ಮನಸ್ಥಿತಿಗಳಿಗೆ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ:ಬಿಜೆಪಿಗೆ ಗೋಡ್ಸೆ ಪರ ಟ್ವೀಟ್ ಕಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.