ವಾರಾಣಸಿ: ಕಳ್ಳಸಾಗಣೆ ಮಾಡುತ್ತಿದ್ದ ₹2 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಉತ್ತರ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಚಿನ್ನದ ಬಿಸ್ಕತ್‌ಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾನುವಾರ, ಚಿನ್ನವನ್ನು ಬ್ರಹ್ಮಪುತ್ರ ಎಕ್ಸ್‌ಪ್ರೆಸ್ ರೈಲಿನ ಮೂಲಕ ದೆಹಲಿಗೆ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರಕಿತು. ಸುಳಿವಿನ ಆಧಾರದ ಮೇಲೆ ವಾರಾಣಸಿ ಡಿಆರ್‌ಐ ಘಟಕದ ಅಧಿಕಾರಿಗಳು ಉತ್ತರ ಪ್ರದೇಶದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣದ ಬಳಿ ರೈಲಿನಲ್ಲಿ ಪರಿಶೀಲನೆ ನಡೆಸಿ ಶಂಕಿತರನ್ನು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರದ ಅರವಿಂದ್ (51) ಮತ್ತು ತಮಿಳುನಾಡಿನ ನಿವಾಸಿ ಅಮಿತ್ (24) ಎಂಬುವವರಿಂದ ಕಂದು ಬಣ್ಣದ ಟೇಪ್‌ನಲ್ಲಿ ಸುತ್ತಿದ ಸುಮಾರು ₹2 ಕೋಟಿ ಬೆಲೆಬಾಳುವ 20 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.