ADVERTISEMENT

ಮುಂಬೈ ವಿಮಾನ ನಿಲ್ದಾಣದಲ್ಲಿ ₹8.37 ಕೋಟಿ ಮೌಲ್ಯದ ಚಿನ್ನ ವಶ

ಪಿಟಿಐ
Published 6 ಮೇ 2024, 8:32 IST
Last Updated 6 ಮೇ 2024, 8:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹8.37 ಕೋಟಿ ಮೌಲ್ಯದ 12.47 ಕೆ.ಜಿ ಚಿನ್ನ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಸ್ಟಮ್ಸ್‌ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್‌ 29 ರಿಂದ ಮೇ 2ರವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

ADVERTISEMENT

ಕಾರ್ಯಾಚರಣೆ ವೇಳೆ ಹಲವು ಪ್ರಯಾಣಿಕರು ಚಿನ್ನವನ್ನು ಮೇಣದ ರೂಪದಲ್ಲಿ, ಬಟ್ಟೆಗಳಲ್ಲಿ, ನೀರಿನ ಬಾಟಲಿ ಮತ್ತು ಗುದನಾಳದಲ್ಲಿ ಬಚ್ಚಿಟ್ಟಿರುವುದು ಕಂಡುಬಂದಿದೆ. ಈ ಸಂಬಂಧ ಐವರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಶೋಧದ ವೇಳೆ, ನೀರಿನ ಬಾಟಲಿನಲ್ಲಿ ಸುಮಾರು 2.58 ಕೆ.ಜಿ ತೂಕದ ಚಿನ್ನವನ್ನು ಮೇಣದ ರೂಪದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮತ್ತೊಂದು ಪ್ರಕರಣದಲ್ಲಿ, ದುಬೈನಿಂದ ಬಂದಿದ್ದ ನಾಲ್ವರು ಭಾರತೀಯ ಪ್ರಯಾಣಿಕರು ಧರಿಸಿದ್ದ ಒಳ ಉಡುಪು ಮತ್ತು ಗುದನಾಳದಲ್ಲಿ 3.335 ಕೆ.ಜಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈ, ಮಸ್ಕತ್‌, ಅಬುಧಾಬಿ, ಬಹ್ರೇನ್‌ ಮತ್ತು ಜೆಡ್ಡಾದಿಂದ ಬಂದಿದ್ದ ಸುಮಾರು 15 ಭಾರತೀಯ ಪ್ರಯಾಣಿಕರ ಶೋಧದ ವೇಳೆ ಅವರ ಒಳ ಉಡುಪು, ಜೀನ್ಸ್‌ ಪಾಕೆಟ್‌ಗಳು, ಲಗೇಜ್‌ ಟ್ರಾಲಿ ಬ್ಯಾಗ್‌ ಮತ್ತು ಗುದನಾಳದಲ್ಲಿ ಸುಮಾರು 5.32 ಕೆ.ಜಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದಲ್ಲದೆ ವಿಮಾನದ ಕುರ್ಚಿಯ ಕೆಳಗಿನ ಪೈಪ್‌ಗಳಿಂದ 1.5 ಕೆ. ಜಿ ತೂಕದ ಆರು ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಮತ್ತೊಬ್ಬ ಪ್ರಯಾಣಿಕನಿಂದ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು ₹14.21 ಲಕ್ಷ ಮೌಲ್ಯದ 9 ಐಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.