ಶಬರಿಮಲೆ (ಕೇರಳ): ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ, ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರುತ್ತಿರುವುದು ಕಂಡು ಬಂದಿದೆ.
ದೇವಸ್ಥಾನದ ಉನ್ನತ ಸಮಿತಿಯಾದ ‘ತಿರುವಾಂಕೂರು ದೇವಸ್ವಂ ಮಂಡಳಿ’ಗೆ ಈ ಲೋಪ ಗಮನಕ್ಕೆ ಬಂದಿದ್ದು ಶೀಘ್ರದಲ್ಲೇ ಅದನ್ನು ಸರಿ ಮಾಡುವುದಾಗಿ ತಿಳಿಸಿದೆ.
ದೇವಸ್ಥಾನದ ಗರ್ಭಗುಡಿಯ ಎಡಮೂಲೆಯಲ್ಲಿ ಚಿನ್ನಲೇಪಿತ ಮಾಳಿಗೆಯಲ್ಲಿ ನೀರು ಸೋರುತ್ತಿರುವುದು ಕಂಡು ಬಂದಿದೆ. ಇದೇನು ದೊಡ್ಡ ಪ್ರಮಾಣದ ದೋಷವಲ್ಲ. ಆಗಸ್ಟ್ 3 ರಂದು ಬಾಗಿಲು ತೆಗೆದು ಪರೀಕ್ಷೆ ಮಾಡಿದರೆ ಸೋರುವ ಪ್ರಮಾಣ ಹಾಗೂ ಹಾನಿಯ ಪ್ರಮಾಣ ಎಷ್ಟು ಎಂದು ಗೊತ್ತಾಗಲಿದೆ ಎಂದು ಮಂಡಳಿ ತಿಳಿಸಿದೆ.
ಬಂಗಾರದ ಮಾಳಿಗೆ ರಿಪೇರಿ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಸಂಪೂರ್ಣವಾಗಿ ‘ತಿರುವಾಂಕೂರು ದೇವಸ್ವಂ ಮಂಡಳಿ’ಯೇ ಭರಿಸಲಿದೆ ಎಂದು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕ ಕಂದರಾರು ರಾಜೀವರು ತಿಳಿಸಿದ್ದಾರೆ.
ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹಾಗೂ ವಾರ್ಷಿಕ ಮಕರ ಜ್ಯೋತಿ ದರ್ಶನಕ್ಕೆದೇಶದ ಹಲವೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.