ADVERTISEMENT

ಚಿನ್ನ ಕಳ್ಳ ಸಾಗಣೆಯಲ್ಲಿ ಕೇರಳ ಸಿಎಂ ಪಾತ್ರ: ಸ್ವಪ್ನಾ ಆರೋಪ ಅಲ್ಲಗಳೆದ ವಿಜಯನ್

ಪಿಟಿಐ
Published 7 ಜೂನ್ 2022, 17:12 IST
Last Updated 7 ಜೂನ್ 2022, 17:12 IST
ಸ್ವಪ್ನಾ ಸುರೇಶ್
ಸ್ವಪ್ನಾ ಸುರೇಶ್   

ತಿರುವನಂತಪುರ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಸದ್ದು ಮಾಡಿದ್ದ ಕೇರಳದ ಚಿನ್ನ ಅಕ್ರಮ ಸಾಗಣೆ ಪ್ರಕರಣವು ಮತ್ತೆ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರಕ್ಕೆ ಸುತ್ತಿಕೊಂಡಿದೆ.

ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು, ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಬಂಧಿಕರು ಮತ್ತು ಅಧಿಕಾರಿಗಳ ಪಾತ್ರವಿರುವ ಬಗ್ಗೆ ಸೋಮವಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿರುವುದಾಗಿ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ಪಿಣರಾಯಿ ವಿಜಯನ್, ಸ್ವಪ್ನಾ ಸುರೇಶ್ ಅವರು ಆರೋಪ ಆಧಾರರಹಿತ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಆರೋಪಗಳನ್ನು ಮಾಡಿರುವುದು ರಾಜಕೀಯ ಕಾರಣಗಳನ್ನು ಒಳಗೊಂಡಿದೆ. ಇವುಗಳ ಹಿಂದೆ ರಾಜಕೀಯ ಅಜೆಂಡಾ ಇದೆ. ಅದನ್ನು ಜನರು ಈಗಾಗಲೇ ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಕೆಲ ಸಮಯದ ಬಳಿಕ ಆರೋಪಿ ಅದೇ ಆರೋಪವನ್ನು ಪುನರಾವರ್ತಿಸಿದ್ದಾರೆ. ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ಧಾರೆ. ಜನರಿಗೆ ಸತ್ಯದ ಅರಿವಿದೆ. ಅವರು ಈ ಹುರುಳಿಲ್ಲದ ಆರೋಪಗಳನ್ನು ತಿರಸ್ಕರಿಸುತ್ತಾರೆ ಎಂದಿದ್ಧಾರೆ.

ADVERTISEMENT

ಈ ಮಧ್ಯೆ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ವಿಜಯನ್ ರಾಜೀನಾಮೆಗೆ ಒತ್ತಾಯಿಸಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ವಿಜಯನ್‌ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಹೇಳಿದೆ.

ಈ ಕುರಿತಂತೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಲ್‌ಡಿಎಫ್ ಮೈತ್ರಿಕೂಟವು, ವಿಜಯನ್ ಅವರನ್ನು ಸಮರ್ಥನೆ ಮಾಡಿಕೊಂಡಿದೆ. ಸ್ವಪ್ನಾ ಸುರೇಶ್ ಆರೋಪದ ಹಿಂದೆ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಮಸಿ ಬಳಿಯುವ ಸಂಚು ಅಡಗಿದೆ ಎಂದು ಟೀಕಿಸಿದೆ.

ಸ್ವಪ್ನಾ ಹೇಳಿದ್ದೇನು?:

‘2016ರಲ್ಲಿ ಮುಖ್ಯಮಂತ್ರಿಗಳು ದುಬೈಗೆ ಭೇಟಿ ನೀಡಿದಾಗ ಹಿರಿಯ ಐಎಎಸ್ ಅಧಿಕಾರಿ ಶಿವಶಂಕರ್ ನನ್ನನ್ನು ಮೊದಲು ಸಂಪರ್ಕಿಸಿದ್ದರು. ಆಗ ನಾನು ತಿರುವನಂತಪುರದ ಕಾನ್ಸುಲೇಟ್‌ನಲ್ಲಿ ಕಾರ್ಯದರ್ಶಿಯಾಗಿದ್ದೆ. ಈ ಮಧ್ಯೆ, ಸಿಎಂ ತಮ್ಮೊಂದಿಗೆ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಅದನ್ನು ದುಬೈಗೆ ತುರ್ತಾಗಿ ಕಳುಹಿಸುವಂತೆ ಶಿವಶಂಕರ್ ನನಗೆ ಹೇಳಿದರು. ಕಾನ್ಸುಲೇಟ್‌ನಲ್ಲಿ ಅದನ್ನು ಸ್ಕ್ಯಾನ್ ಮಾಡಿದಾಗ ಅದರಲ್ಲಿ ಹಣವಿರುವುದು ಬೆಳಕಿಗೆ ಬಂದಿತ್ತು. ಆಗಿನಿಂದ ಈ ಪ್ರಕರಣ ಆರಂಭವಾಯಿತು’ಎಂದು ಸ್ವಪ್ನಾ ಅವರು ನ್ಯಾಯಾಲಯಕ್ಕೆ ಹಾಜರಾದ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಅಲ್ಲದೆ, ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಸಿಎಂ, ಸಂಬಂಧಿಕರು, ಅಧಿಕಾರಿಗಳ ಪಾತ್ರವಿರುವ ಬಗ್ಗೆಯೂ ಕೋರ್ಟ್‌ಗೆ ತಿಳಿಸಿರುವುದಾಗಿ ಸ್ವಪ್ನಾ ಹೇಳಿದ್ದಾರೆ.

‘ಜೀವ ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ನನ್ನ ಹೇಳಿಕೆ ದಾಖಲಿಸಿದ್ದೇನೆ. ರಕ್ಷಣೆಯನ್ನೂ ಕೋರಿದ್ದೇನೆ. ಅದನ್ನು ಶೀಘ್ರವೇ ನ್ಯಾಯಾಲಯ ಪರಿಗಣಿಸುತ್ತದೆ ಎಂದು ಸ್ವಪ್ನಾ ಹೇಳಿದ್ದಾರೆ. ಅಂದಿನ ಮುಖ್ಯ ಕಾರ್ಯದರ್ಶಿ ಶಿವಶಂಕರ್, ಮುಖ್ಯಮಂತ್ರಿ, ಪತ್ನಿ ಕಮಲಾ, ಪುತ್ರಿ ರೀನಾ, ಅವರ ಕಚೇರಿ ಕಾರ್ಯದರ್ಶಿ ಸಿ.ಎಂ. ರವೀಂದ್ರನ್, ಅಧಿಕಾರಿ ನಳನಿ ನೆಟ್ಟೋ ಮತ್ತು ಮಾಜಿ ಸಚಿವ ಕೆ ಟಿ ಜಲೀಲ್ ಅವರು ಚಿನ್ನ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವ ಬಗ್ಗೆ ವಿವರವಾದ ಹೇಳಿಕೆಯನ್ನು ನೀಡಿದ್ದೇನೆ, ನ್ಯಾಯಾಲಯವು ನನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದೆ’ ಎಂದು ಸ್ವಪ್ನಾ ಹೇಳಿದ್ದಾರೆ.

‘ತುಂಬಾ ಭಾರವಾದ ಮತ್ತು ಕೆಲವು ಲೋಹದ ವಸ್ತುಗಳನ್ನು ಒಳಗೊಂಡಿರುವ ಬಿರಿಯಾನಿ ಪಾತ್ರೆಗಳನ್ನು ಜವಾಹರ್ ನಗರದ ಕಾನ್ಸುಲ್ ಜನರಲ್ ನಿವಾಸದಿಂದ ಕ್ಲಿಫ್ ಹೌಸ್‌ಗೆ ಹಲವಾರು ಬಾರಿ ಕಾನ್ಸುಲೇಟ್‌ನ ವಾಹನಗಳಲ್ಲಿ ಶಿವಶಂಕರ್ ಅವರ ಸೂಚನೆಯಂತೆ ಸಾಗಿಸಲಾಗಿತ್ತು’ ಎಂದೂ ಸ್ವಪ್ನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.