ತಿರುವನಂತಪುರ: ತೀವ್ರ ಕುತೂಹಲ ಕೆರಳಿಸಿದ್ದ, ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರ ಇತ್ತೀಚಿನ ಹೇಳಿಕೆಯು ರಾಜಕೀಯ ವಿವಾದಕ್ಕೆ ಆಸ್ಪದವಾಗಿದೆ.
‘ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಘಟನೆ ಮುಖ್ಯಮಂತ್ರಿಗಳ ಕಚೇರಿಗೆ ಅರಿವಿತ್ತು. ಅಲ್ಲದೇ, ಗುಪ್ತದಳ ಮಾಹಿತಿಯನ್ನು ದೇಶವಿರೋಧಿ ಕೃತ್ಯಗಳಿಗೆ ಬಳಸಲಾಗಿದೆ’ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಸ್ವಪ್ನಾ ಸುರೇಶ್ ಈಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ಟಿ.ವಿ. ಚಾನಲ್‌ಗಳಿಗೆ ಸಂದರ್ಶನ ನೀಡಿದ್ದರು.
ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್, ‘ಅಕ್ರಮವಾಗಿ ಬ್ಯಾಗೇಜ್ ಬಿಡುಗಡೆ, ಆರೋಪಿ ರಾಜ್ಯದಿಂದ ತೆರಳಲು ಅನುವಾಗುವಂತೆ ಮುಖ್ಯಮಂತ್ರಿಗಳ ಕಚೇರಿಯು ಮಧ್ಯಪ್ರವೇಶಿಸಿ, ನೆರವಾಗಿದೆ’ ಎಂದು ಆರೋಪಿಸಿದ್ದಾರೆ.
ಇತ್ತೀಚಿಗೆ ಬಯಲಾಗಿರುವ ಆಡಿಯೊದಲ್ಲಿದ್ದ ಸ್ವಪ್ನಾ ಅವರ ಹೇಳಿಕೆ ಕುರಿತಂತೆ ತನಿಖೆ ನಡೆಸಬೇಕು ಎಂದೂ ಸತೀಶನ್ ಒತ್ತಾಯಿಸಿದ್ದಾರೆ. ‘ಜೈಲಿನಲ್ಲಿದ್ದಾಗ ನನ್ನ ಮೇಲೆ ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಡವಿತ್ತು. ಅದು, ಪೂರ್ವಯೋಜಿತ ಕ್ರಮ. ನಾನು ಇ.ಡಿ. ವಶದಲ್ಲಿದ್ದಾಗ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೀಡಿದ್ದ ಮೊಬೈಲ್ ಫೋನ್ ಮೂಲಕ ಅದನ್ನು ಮುದ್ರಿಸಿಕೊಳ್ಳಲಾಗಿತ್ತು’ ಎಂದು ಸ್ವಪ್ನಾ ಹೇಳಿದ್ದರು. ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಇದರ ಹಿಂದಿದ್ದಾರೆ ಎಂದು ಆಗ ಆರೋಪಿಸಲಾಗಿತ್ತು.
ಈಗ ಸ್ನಪ್ನಾ ಹೆಸರಿನಲ್ಲಿ ಬಿಡುಗಡೆಯಾಗಿರುವ ಆಡಿಯೊ ಪ್ರಕಾರ, ಹಗರಣದಲ್ಲಿ ಸಿ.ಎಂ ಅವರ ಪಾತ್ರ ಇಲ್ಲ. ಅದೊಂದು ಪೂರ್ವಯೋಜಿತ ಕೃತ್ಯ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಇದನ್ನು ಮಾಡಲಾಗಿದೆ. ಇದರ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಇತ್ತು ಎಂದು ಸತೀಶನ್ ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.