ಬೆಂಗಳೂರು: ಇಂದು ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ. ಇವರು ಹುಟ್ಟುಹಬ್ಬವನ್ನು ಸರ್ಕಾರ ಉತ್ತಮ ಆಡಳಿತ ದಿನ (ಗುಡ್ ಗವರ್ನನ್ಸ್ ಡೇ) ಎಂದು ಆಚರಿಸುತ್ತಾ ಬಂದಿದೆ.
ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ವಾಜಪೇಯಿ ಮಧ್ಯ ಪ್ರದೇಶದ ಗ್ವಾಲಿಯರ ಹತ್ತಿರದ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ 1924ರ ಡಿಸೆಂಬರ್ 25ರಂದು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಜನಿಸಿದರು.
ದೇಶದ ಅಭಿವೃದ್ಧಿಗೆ ವಾಜಪೇಯಿ ನೀಡಿದ ಕೊಡುಗೆಯನ್ನು ಸ್ಮರಿಸಲು 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲು ನಿರ್ಧರಿಸಿತ್ತು. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 25 ಅನ್ನು ‘ಉತ್ತಮ ಆಡಳಿತ ದಿನ'ವನ್ನಾಗಿ ಆಚರಿಸಲಾಗುತ್ತಿದೆ.
ಕ್ರಿಸ್‌ಮಸ್ ದಿನದಂದು ವಾಜಪೇಯಿ ಅವರ ಹುಟ್ಟುಹಬ್ಬ ಇರುವುದು ವಿಶೇಷ.
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಮಾಂಸಾಹಾರವನ್ನು ಇಷ್ಟಪಡುತ್ತಿದ್ದರು. ಸಿಗಡಿ ಅವರ ನೆಚ್ಚಿನ ಆಹಾರ ಪದಾರ್ಥವಾಗಿತ್ತು.
ಚಿಕ್ಕಂದಿನಿಂದಲೂ ಕಾವ್ಯದ ಮೇಲೆ ಒಲವು ಹೊಂದಿದ್ದ ಅವರು, 10ನೇ ತರಗತಿಯಲ್ಲಿದ್ದಾಗ ತಮ್ಮ ಮೊದಲ ಕವಿತೆಯನ್ನು ಬರೆದಿದ್ದರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದರು.
ಅಜಾತಶತ್ರು ಎಂದೇ ಖ್ಯಾತರಾದ ಇವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ರಾಜಕಾರಣಿ.
47 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದ ಹಿರಿಮೆ ಅವರದ್ದು.
3 ಬಾರಿ ಪ್ರಧಾನ ಮಂತ್ರಿಯಾಗಿ, 11 ಬಾರಿ ಲೋಕಸಭೆ ಹಾಗೂ 2 ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ದೇಶದ ಪ್ರಧಾನಿಯಾದ ಮೊದಲ ಬಿಜೆಪಿಯ ನಾಯಕ.
ಅವಿವಾಹಿತರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಮಿತಾ ಭಟ್ಟಾಚಾರ್ಯ ಎಂಬ ದತ್ತು ಪುತ್ರಿ ಇದ್ದಾರೆ.
2014ರ ಡಿಸೆಂಬರ್ ಅಂತ್ಯದಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.
2018ರ ಆಗಸ್ಟ್ 16ರಂದು ನವದೆಹಲಿಯಲ್ಲಿ ನಿಧನರಾದರು.
ವಾಜಪೇಯಿಯವರ ಪ್ರಮುಖ ಸಂದೇಶಗಳು
ನಾವು ಅನಗತ್ಯವಾಗಿ ಯುದ್ಧಗಳಲ್ಲಿ ನಮ್ಮ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತಿದ್ದೇವೆ. ಬದಲಿಗೆ ನಿರುದ್ಯೋಗ, ರೋಗ, ಬಡತನ ನಿರ್ಮೂಲನೆಗೆ ಅದನ್ನು ಬಳಸಬೇಕಿದೆ.
ನೀವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು ಆದರೆ ನೆರೆಹೊರೆಯವರನ್ನಲ್ಲ.
ಶಾಂತಿಯನ್ನು ಸ್ವಾತಂತ್ರ್ಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಏಕೆಂದರೆ ಯಾರೂ ತನ್ನ ಸ್ವಾತಂತ್ರ್ಯವನ್ನು ಹೊಂದಿರದ ಹೊರತು ಶಾಂತಿಯಿಂದ ಇರಲು ಸಾಧ್ಯವಿಲ್ಲ.
ಗರೀಬಿ ಹಠಾವೋ ಘೋಷಣೆ ನೀಡುವ ಮೂಲಕ ಚುನಾವಣೆ ಗೆಲ್ಲುವುದು ಸುಲಭ. ಆದರೆ ಘೋಷಣೆಗಳು ಬಡತನವನ್ನು ತೊಡೆದುಹಾಕುವುದಿಲ್ಲ.
ಗೆಲುವು ಮತ್ತು ಸೋಲು ಜೀವನದ ಒಂದು ಭಾಗ. ಅದನ್ನು ಸಮಚಿತ್ತದಿಂದ ನೋಡಬೇಕು.
ನನ್ನ ಕವಿ ಹೃದಯವು ರಾಜಕೀಯ ಸಮಸ್ಯೆಗಳನ್ನು ಎದುರಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ವಿಶೇಷವಾಗಿ ನನ್ನ ಆತ್ಮಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ.
ನನಗೆ, ಅಧಿಕಾರವು ಎಂದಿಗೂ ಆಕರ್ಷಣೆಯಾಗಿರಲಿಲ್ಲ.
ಭಯೋತ್ಪಾದನೆ ಕೊಳೆಯುವ ಗಾಯವಾಗಿ ಮಾರ್ಪಟ್ಟಿದೆ. ಇದು ಮಾನವೀಯತೆಯ ಶತ್ರು.
ಅಭಿವೃದ್ಧಿಗೆ ಶಾಂತಿ ಅತ್ಯಗತ್ಯ.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿ ಸಾಧ್ಯವಿಲ್ಲ.
ಭಾರತವು ಜಾತ್ಯತೀತವಾಗಿಲ್ಲದಿದ್ದರೆ, ಭಾರತವು ಭಾರತವೇ ಅಲ್ಲ.
1992ರಲ್ಲಿ ಪದ್ಮವಿಭೂಷಣ
1993ರಲ್ಲಿ ಕಾನ್ಪುರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ
1994ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ
1994ರಲ್ಲಿ ಅತ್ಯುತ್ತಮ ಸಂಸದೀಯ ಪ್ರಶಸ್ತಿ
2014ರ ಡಿಸೆಂಬರ್ ಅಂತ್ಯದಲ್ಲಿ ಭಾರತ ರತ್ನ ಪ್ರಶಸ್ತಿ
2015ರಲ್ಲಿ ಬಾಂಗ್ಲಾದೇಶ ಮುಕ್ತಿಜುಧೋ ಸನ್ಮನೋನಾ ಪ್ರಶಸ್ತಿ (ಬಾಂಗ್ಲಾದೇಶ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.