ಚಂಡೀಗಢ: ಶಾಲೆಗಳಲ್ಲಿ ‘ಶುಭೋದಯ’ದ (Good morning) ಬದಲು ‘ಜೈ ಹಿಂದ್’ ಹೇಳಬೇಕು. ಈ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯ ಹೆಮ್ಮೆ ಆಳವಾಗಿ ಬೇರೂರುವಂತೆ ಮಾಡಬೇಕು. ಹೀಗೆಂದು ಹರಿಯಾಣ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹರಿಯಾಣದ ಶಾಲಾ ಶಿಕ್ಷಣ ಮಂಡಳಿ ಗುರುವಾರ ಸುತ್ತೋಲೆ ಹೊರಡಿಸಿದ್ದು, ಇದೇ 15ರಂದು ನಡೆಯಲಿರುವ 78ನೆ ಸ್ವಾತಂತ್ರ್ಯೋತ್ಸವದ ಬಳಿಕ ರಾಜ್ಯದ ಎಲ್ಲ ಶಾಲೆಗಳಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.
ಸ್ವಾತಂತ್ರ್ಯ ಹೋರಾಟದ ವೇಳೆ ಸುಭಾಷ್ ಚಂದ್ರ ಬೋಸ್ ಅವರು ‘ಜೈ ಹಿಂದ್’ ಎಂಬುದನ್ನು ಮೊದಲಿಗೆ ಬಳಕೆ ಮಾಡಿದ್ದರು. ನಂತರ ಸೇನಾ ಪಡೆಗಳಲ್ಲಿ ಗೌರವ ವಂದನೆ ಸೂಚಿಸಲು ಈ ಪದವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳು ಪ್ರತಿದಿನ ದೇಶಭಕ್ತಿಯೊಂದಿಗೆ ಶುಭಾಶಯ ಕೋರುವುದರಿಂದ, ಸ್ವಾತಂತ್ರ್ಯ ಹೋರಾಟದ ವೇಳೆ ತ್ಯಾಗ–ಬಲಿದಾನ ಮಾಡಿದ ಹಿರಿಯರಿಗೆ ಗೌರವ ಸೂಚಿಸುವುದನ್ನು ಪ್ರೋತ್ಸಾಹಿಸಿದಂತಾಗುತ್ತದೆ. ‘ಜೈ ಹಿಂದ್’ ಎಂಬುದು ಭಾಷೆ, ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ಎಲ್ಲೆಯನ್ನು ಮೀರಿದ್ದು, ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತದೆ. ಜೊತೆಗೆ ಮಕ್ಕಳಲ್ಲಿ ಶಿಸ್ತು ಹಾಗೂ ಏಕತೆಯ ಪ್ರಜ್ಞೆ ಮೂಡಿಸಲಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.