ಮುಂಬೈ: ಮಹಾರಾಷ್ಟ್ರದ ಪಾಲ್ಗಾರ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲೊಂದು ಹಳಿತಪ್ಪಿದ್ದರಿಂದ, ಪಶ್ಚಿಮ ರೈಲ್ವೇ ವಿಭಾಗವು ಹಲವು ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ. ಕೆಲವು ರೈಲುಗಳ ಕಾರ್ಯಾಚರಣೆಯನ್ನು ಮರುನಿಗದಿಗೊಳಿಸಿದೆ. ಘಟನೆ ನಡೆದು 15 ಗಂಟೆಗಳ ನಂತರವೂ ಮರುಸ್ಥಾಪನೆ ಕೆಲಸಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ 5.08ಗಂಟೆ ಹೊತ್ತಿಗೆ ಗೂಡ್ಸ್ ರೈಲೊಂದರ 7 ಬೋಗಿಗಳು ಹಳಿತಪ್ಪಿವೆ. ಇದರಿಂದ ಗುಜರಾತ್‌ನಿಂದ ಮುಂಬೈಗೆ ಬರುವ ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಒಟ್ಟು 43 ಬೋಗಿಗಳಿದ್ದ ಗೂಡ್ಸ್ ರೈಲು ಕಬ್ಬಿಣದ ಸುರಳಿಗಳನ್ನು ತುಂಬಿಕೊಂಡು ವಿಶಾಖಪಟ್ಟಣದಿಂದ ಗುಜರಾತ್‌ನ ಕರಾಂಬೆಲಿಗೆ ಸಾಗುತ್ತಿತ್ತು.
ಹಿಂಬದಿಯ ಗಾರ್ಡ್ ಬೋಗಿ ಸೇರಿದಂತೆ 7 ಬೋಗಿಗಳು ಹಳಿ ತಪ್ಪಿವೆ. ಇದದಿಂದ ಸುರುಳಿಗಳು ಹಳಿಗಳ ಮೇಲೆ ಬಿದ್ದಿವೆ. ಹಳಿತಪ್ಪಿದ ಬೋಗಿಗಳಿಂದ ಹಾಗೂ ಸುರುಳಿಗಳು ಬಿದ್ದಿದ್ದರಿಂದ ಹಳಿಗೆ ಹೆಚ್ಚಿನ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಕೆಲವು ರೈಲುಗಳನ್ನು ಸಂಪೂರ್ಣವಾಗಿ / ಕೆಲವು ರೈಲುಗಳನ್ನು ಭಾಗಶಃವಾಗಿ ರದ್ದು ಮಾಡಲಾಗಿದೆ. ಹಲವು ರೈಲುಗಳ ಮಾರ್ಗ ಬದಲಿಸಿದಲಾಗಿದೆ.
‘ಹಳಿ ತಪ್ಪಿರುವ ಬೋಗಿಗಳನ್ನು ಸ್ಥಳದಿಂದ ತೆರೆವುಗೊಳಿಸಲಾಗಿದೆ. ರಾತ್ರಿಯಿಂದ ಸಿಂಗಲ್ ಲೈನ್ ಸಂಚಾರ ಆರಂಭಗೊಂಡಿದ್ದು, ಕೆಲವು ರೈಲುಗಳು ಬೊಯಿಸರ್–ಪಾಲ್ಗಾರ್–ಕೆಲ್ವೆ ಮಾರ್ಗವಾಗಿ ಸಂಚರಿಸಿವೆ. ಮರುಸ್ಥಾಪನೆ ಕೆಲಸ ಭರದಿಂದ ಸಾಗಿದ್ದು, ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಪೂರ್ತಿಯಾಗುವ ವಿಶ್ವಾಸ ಇದೆ’ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಸುಮಾರು 250 ಕಾರ್ಮಿಕರು ಕೆಲಸ ಮಾಡುತ್ತಿದ್ದು, 2 ಹೈಡ್ರಾ ಕ್ರೇನ್‌ಗಳು, ಭೂಮಿ ಅಗೆಯುವ 3 ಯಂತ್ರಗಳು, 300 ಟನ್ ಕ್ರೇನ್ ಮತ್ತು ಇತರ ಯಂತ್ರೋಪಕರಣಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.