ಬೆಂಗಳೂರು: ಚಂದ್ರಯಾನ–3 ಯಶಸ್ವಿ ಕಾರ್ಯಾಚರಣೆ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಅಡಿ ಇಟ್ಟ ವಿಶ್ವದ ಮೊದಲ ಮತ್ತು ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಸಾಧನೆಯನ್ನು ಗೂಗಲ್ ವಿಶೇಷ ಆ್ಯನಿಮೇಟೆಡ್ ಸಂಭ್ರಮಿಸಿದೆ. ಅಲ್ಲದೆ, ಈ ಕಾರ್ಯಾಚರಣೆಯಲ್ಲಿ ಶ್ರಮ ವಹಿಸಿದ ಇಸ್ರೊ ವಿಜ್ಞಾನಿಗಳಿಗೂ ಗೂಗಲ್ ಶುಭಾಶಯ ತಿಳಿಸಿದೆ.
ಇಸ್ರೊ ಕಳುಹಿಸಿದ್ದ ವಿಕ್ರಮ್ ಲ್ಯಾಂಡರ್ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಸುತ್ತ ಪರಿಚಲನೆ ನಡೆಸುವುದು. ಬಳಿಕ, ದಕ್ಷಿಣ ಧ್ರುವದಲ್ಲಿ ಸೂಕ್ತ ಸ್ಥಳ ಗುರುತಿಸಿ ಇಳಿಯುವ ಆ್ಯನಿಮೇಟೆಡ್ ದೃಶ್ಯ ಡೂಡಲ್‌ನಲ್ಲಿದೆ. ವಿಕ್ರಮ್ ಲ್ಯಾಂಡರ್‌ನಿಂದ ಹೊರಬರುವ ರೋವರ್ ಪ್ರಗ್ಯಾನ್, ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ಪ್ರಾರಂಭಿಸುತ್ತಾನೆ. ಈ ಸಾಧನೆಯಿಂದ ಚಂದ್ರನು ಹರ್ಷಗೊಂಡಿದ್ದಾನೆ. ಭೂಮಿಯ ಪ್ರತಿನಿಧಿ ಎಂಬಂತೆ ರೋವರ್ ಸಹ ಚಂದ್ರನ ಜೊತೆ ಸಂಭ್ರಮಿಸುವ ಆ್ಯನಿಮೇಟೆಡ್ ದೃಶ್ಯವನ್ನೂ ಇದರಲ್ಲಿ ನೋಡಬಹುದಾಗಿದೆ.
ಜುಲೈ 14ರಂದು ಬಾಹ್ಯಾಕಾಶ ನೌಕೆ ಉಡಾವಣೆಯಾದ ಸಮಯದಿಂದ ಆಗಸ್ಟ್ 23ರ ಟಚ್‌ಡೌನ್‌ವರೆಗಿನ ಚಂದ್ರಯಾನ-3ರ ಪ್ರಯಾಣವನ್ನು ವಿವರಿಸುವ ಪುಟವನ್ನು ಸಹ ಗೂಗಲ್ ರಚಿಸಿದೆ.
ಚಂದ್ರನ ದಕ್ಷಿಣ ಧ್ರುವವು ಬಾಹ್ಯಾಕಾಶ ವಿಜ್ಞಾನಿಗಳಿಗೆ ಏಕೆ ಬಹಳ ಮುಖ್ಯವಾಗಿದೆ ಎಂಬುದನ್ನು ಸಹ ಇದರಲ್ಲಿ ಎತ್ತಿ ತೋರಿಸಲಾಗಿದೆ.
'ಚಂದ್ರನ ದಕ್ಷಿಣ ಧ್ರುವವು ಬಾಹ್ಯಾಕಾಶ ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯ ಕ್ಷೇತ್ರವಾಗಿದೆ. ಚಂದ್ರನ ಕುಳಿಗಳಲ್ಲಿ ಮಂಜುಗಡ್ಡೆಯ ಅಸ್ತಿತ್ವವನ್ನು ಅಂದಾಜಿಸಿದ್ದಾರೆ. ಚಂದ್ರಯಾನ-3 ಈಗ ಈ ಅಂದಾಜನ್ನು ದೃಢಪಡಿಸಬೇಕಿದೆ.
ಚಂದ್ರಯಾನ–3 ಯಶಸ್ಸನ್ನು ದೇಶವು ಸಂಭ್ರಮಿಸುತ್ತಿರುವ ನಡುವೆಯೇ ಲ್ಯಾಂಡರ್‌ನಿಂದ ಹೊರಬಂದ ರೋವರ್ ತನ್ನ ಅನ್ವೇಷಣೆಯ ಕೆಲಸ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.