ADVERTISEMENT

ಇಂಟರ‍್ಯಾಕ್ಟಿವ್ ಗೇಮ್ ಡೂಡಲ್‌ ಮೂಲಕ ಪಾನಿ ಪೂರಿಯನ್ನು ಸಂಭ್ರಮಿಸಿದ Google

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2023, 10:22 IST
Last Updated 12 ಜುಲೈ 2023, 10:22 IST
Venugopala K.
   Venugopala K.

ಬೆಂಗಳೂರು: ಜಗತ್ತಿನ ದೈತ್ಯ ಸರ್ಚ್ ಎಂಜಿನ್ ಗೂಗಲ್ ಇಂದು ವಿಶೇಷ ಇಂಟರ‍್ಯಾಕ್ಟಿವ್ ಗೇಮ್ ಡೂಡಲ್‌ ಮೂಲಕ ಭಾರತದ ಪ್ರಮುಖ ಸ್ಟ್ರೀಟ್ ಫುಡ್ ‘ಪಾನಿ ಪೂರಿ’ ಅನ್ನು ಸಂಭ್ರಮಿಸುತ್ತಿದೆ.

ಜುಲೈ 12, 2015ರಲ್ಲಿ ಮಧ್ಯಪ್ರದೇಶದ ಇಂದೋರ್‌ನ ವಿಂಡೋರಾ ರೆಸ್ಟೋರೆಂಟ್‌ 51 ಫ್ಲೇವರ್‌ಗಳ ಪಾನಿ ಪೂರಿಗಳನ್ನು ತಯಾರಿಸುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’(ಜಿಬಿಡಬ್ಲ್ಯುಆರ್) ಸೇರಿತ್ತು. ಅದಾದ, 8 ವರ್ಷಗಳ ಬಳಿಕ ಗೂಗಲ್, ಇಂಟರ್‍ಯಾಕ್ಟಿವ್ ಮತ್ತು ಬಣ್ಣಬಣ್ಣದ ಡೂಡಲ್ ಗೇಮ್ ಮೂಲಕ ಈ ಸಾಧನೆಯನ್ನು ಗೌರವಿಸುತ್ತಿದೆ.

ಈ ಗೇಮ್‌ನಲ್ಲಿ, ವಿವಿಧ ಪಾನಿ ಪೂರಿ ಫ್ಲೇವರ್‌ಗಳ‌ನ್ನು ಆಯ್ಕೆ ಮಾಡುವ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಪಾನಿ ಪೂರಿ ಆರ್ಡರ್‌ಗಳನ್ನು ಪೂರೈಸಲು ಸಹಾಯ ಮಾಡುವ ಅವಕಾಶವನ್ನು ಗೂಗಲ್ ಬಳಕೆದಾರರಿಗೆ ನೀಡಿದೆ.

ADVERTISEMENT

ಪಾನಿ ಪೂರಿಯನ್ನು ‘ಆಲೂಗಡ್ಡೆ, ಕಡಲೆ, ಮೆಣಸಿನಕಾಯಿ, ಮಸಾಲೆಗಳು ಮತ್ತು ಸುವಾಸನೆಯ ನೀರಿನಿಂದ ತುಂಬಿದ ಗರಿಗರಿಯಾದ ಚಿಪ್ಪಿನಿಂದ ಮಾಡಿದ ಜನಪ್ರಿಯ ದಕ್ಷಿಣ ಏಷ್ಯಾದ ಬೀದಿಬದಿ ಆಹಾರ’ ಎಂದು ಕರೆಯುವ ಮೂಲಕ Google ಹೊಸ ಪಾನಿ ಪೂರಿ ಗೇಮ್ ಡೂಡಲ್ ಅನ್ನು ಪರಿಚಯಿಸಿದೆ.

ಪಾನಿ ಪೂರಿಯನ್ನು ದೇಶದ ವಿವಿಧೆಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ರುಚಿ, ಬಳಸುವ ಪದಾರ್ಥಗಳು, ತಯಾರಿಕಾ ವಿಧಾನಗಳಲ್ಲಿಯೂ ಭಿನ್ನತೆ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದಂತಹ ದಕ್ಷಿಣದ ರಾಜ್ಯಗಳಲ್ಲಿ ಪಾನಿ ಪೂರಿಯನ್ನು ಸಾಮಾನ್ಯವಾಗಿ ಬೇಯಿಸಿದ ಕಡಲೆ, ಬಟಾಣಿ ಮಿಶ್ರಣ ಮತ್ತು ಮಸಾಲೆಯುಕ್ತ ಪಾನಿಯೊಂದಿಗೆ ಕಚ್ಚುವಿಕೆಯ ಗಾತ್ರದ ಪೂರಿಯಲ್ಲಿ ನೀಡಲಾಗುತ್ತದೆ.

ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ನವದೆಹಲಿಯಂತಹ ಉತ್ತರ ಭಾರತದ ರಾಜ್ಯಗಳಲ್ಲಿ, ‘ಗೋಲ್ ಗಪ್ಪಾ’ಎಂದು ಕರೆಯಲಾಗುತ್ತಿದ್ದು, ಬೇಯಿಸಿದ ಆಲೂಗಡ್ಡೆ, ಕಡಲೆ, ಜಲ್ಜೀರಾ ಸುವಾಸನೆಯ ಪಾನಿಯೊಂದಿಗೆ ಸಣ್ಣ ಪೂರಿಯಲ್ಲಿ ನೀಡಲಾಗುತ್ತದೆ. ಅದೇ ರೀತಿ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ, ಪುಚ್ಕಾಸ್ ಅಥವಾ ಫುಚ್ಕಾಸ್ ಎಂದು ಕರೆಯಲಾಗುತ್ತದೆ. ಹುಣಸೆ ಹಣ್ಣಿನ ತಿರುಳನ್ನು ಇದರಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.