ನವದೆಹಲಿ: ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನು ಅವರಿಗೆ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.
ಹಮೀದಾ ಅವರ ಡೂಡಲ್ ಕಲಾಕೃತಿಯನ್ನು ಬೆಂಗಳೂರು ಮೂಲದ ಕಲಾವಿದೆ ದಿವ್ಯಾ ನೇಗಿ ಅವರು ರಚಿಸಿದ್ದಾರೆ ಎಂದು ಗೂಗಲ್ ತಿಳಿಸಿದೆ.
'ಅಲಿಗಢ ಅಮೆಜಾನ್' ಎಂದೇ ಖ್ಯಾತಿ ಪಡೆದಿರುವ ಹಮೀದಾ ಬಾನು, 1900 ದಶಕದ ಆರಂಭದಲ್ಲಿ ಉತ್ತರ ಪ್ರದೇಶದ ಅಲಿಗಢದ ಕುಸ್ತಿಪಟುಗಳ ಕುಟುಂಬದಲ್ಲಿ ಜನಿಸಿದ್ದರು. 1940–50ರ ದಶಕದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲವಾಗಿ ವಿರೋಧಿಸುತ್ತಿದ್ದ ಕಾಲದಲ್ಲಿಯೇ 300ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮೀದಾ ಗೆದ್ದಿದ್ದರು.
1954ರ ಇದೇ ದಿನದಂದು ನಡೆದ ಕುಸ್ತಿ ಪಂದ್ಯದಲ್ಲಿ ಖ್ಯಾತ ಕುಸ್ತಿಪಟು ಬಾಬಾ ಪೈಲ್ವಾನ್ ಅವರನ್ನು ಕೇವಲ ಒಂದು ನಿಮಿಷ ಮತ್ತು 34 ಸೆಕೆಂಡುಗಳಲ್ಲಿ ಸೋಲಿಸುವ ಮೂಲಕ ಹಮೀದಾ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದರು. ಆನಂತರ ಅವರು ವೃತ್ತಿಪರ ಕುಸ್ತಿಯಿಂದ ನಿವೃತ್ತರಾದರು.
‘ಭಾರತವಲ್ಲದೇ ಪ್ರಪಂಚದಾದ್ಯಂತ ಹಮೀದಾ ಬಾನು ತಮ್ಮ ಧೈರ್ಯ ಸಾಹಸಗಳಿಗೆ ಹೆಸರುವಾಸಿಯಾಗಿದ್ದರು. ಕುಸ್ತಿಪಟುವಲ್ಲದೇ ಒಬ್ಬ ಮಹಿಳೆಯಾಗಿಯೂ ಅವರು ಛಾಫು ಮೂಡಿಸಿದ್ದರು’ ಎಂದು ಗೂಗಲ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.