ADVERTISEMENT

ಕವಯಿತ್ರಿ ಸುಭದ್ರಾ ಕುಮಾರಿಗೆ ‘ಡೂಡಲ್‌’ ಗೌರವ

ಪಿಟಿಐ
Published 16 ಆಗಸ್ಟ್ 2021, 6:25 IST
Last Updated 16 ಆಗಸ್ಟ್ 2021, 6:25 IST
.
.   

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಕವಯಿತ್ರಿ ಸುಭದ್ರಾ ಕುಮಾರಿ ಚೌಹಾನ್‌ ಅವರ 117ನೇ ಜನ್ಮ ದಿನದಂದು ಗೂಗಲ್‌ ಡೂಡಲ್‌ ವಿಶೇಷ ಗೌರವ ಸಲ್ಲಿಸಿದೆ.

ನ್ಯೂಜಿಲೆಂಡ್‌ ಮೂಲದ ಕಲಾವಿದ ಪ್ರಭಾ ಮಲ್ಯಾ ಅವರು ವಿನ್ಯಾಸಗೊಳಿಸಿರುವ ಡೂಡಲ್‌ ಚಿತ್ರವನ್ನು ಗೂಗಲ್‌ನ ಮುಖಪುಟದಲ್ಲಿ ಸೋಮವಾರ ಪ್ರಕಟಿಸಲಾಗಿದೆ.

ಸೀರೆ ಧರಿಸಿರುವ ಸುಭದ್ರಾ ಅವರು, ಪೆನ್‌ ಮತ್ತು ಕಾಗದದ ಜತೆ ಕುಳಿತಿರುವ ಚಿತ್ರವನ್ನು ರಚಿಸಲಾಗಿದೆ. ಅವರ ಚಿತ್ರದ ಹಿಂದಿನ ಒಂದು ಬದಿಯಲ್ಲಿ ‘ಝಾನ್ಸಿ ಕಿ ರಾಣಿ’ ಕವಿತೆಯ ಸನ್ನಿವೇಶವನ್ನು ಚಿತ್ರಿಸಲಾಗಿದೆ. ಇನ್ನೊಂದೆಡೆ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ರಚಿಸಲಾಗಿದೆ.

ADVERTISEMENT

ಉತ್ತರ ಪ್ರದೇಶದ ಪ್ರಯಾಗರಾಜ್‌ನ ನಿಹಾಲ್ಪುರ ಗ್ರಾಮದಲ್ಲಿ 1904ರಲ್ಲಿ ಜನಿಸಿದ ಸುಭದ್ರಾ ಅವರು, ಕವಯತ್ರಿಯಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ರಾಷ್ಟ್ರದ ಗಮನಸೆಳೆದಿದ್ದರು.

‘ಸುಭದ್ರಾ ನಿರಂತರವಾಗಿ ಬರೆಯುತ್ತಿದ್ದರು. 9 ವರ್ಷವರಿದ್ದಾಗಲೇ ಅವರ ಮೊದಲ ಕವಿತೆ ಪ್ರಕಟವಾಗಿತ್ತು. ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕವಿತೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು’ ಎಂದು ಗೂಗಲ್‌ ವಿವರಿಸಿದೆ.

88 ಕವಿತೆಗಳು ಮತ್ತು 46 ಸಣ್ಣ ಕಥೆಗಳನ್ನು ಅವರು ರಚಿಸಿದ್ದರು. ಭಾರತೀಯ ಮಹಿಳೆಯರು ಎದುರಿಸುತ್ತಿದ್ದ ಲಿಂಗ ಮತ್ತು ಜಾತಿ ತಾರತಮ್ಯದ ಕುರಿತು ಹೆಚ್ಚು ಕವಿತೆಗಳನ್ನು ಅವರು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.