ನವದೆಹಲಿ: ವಿಶ್ವದಾದ್ಯಂತ 2023ಕ್ಕೆ ವಿದಾಯ ಹೇಳಿ, 2024ರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕೈಜೋಡಿಸಿರುವ ಗೂಗಲ್, ವಿಶಿಷ್ಟ ಕಸ್ಟಮೈಸ್ಡ್ ಆ್ಯನಿಮೆಟೇಡ್ ಡೂಡಲ್ ಮೂಲಕ ಗಮನ ಸೆಳೆದಿದೆ.
ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್‌ನೊಂದಿಗೆ ಆಚರಿಸಿದೆ. ಮಿನುಗುವ ಡಿಸ್ಕೊ ಚೆಂಡುಗಳು, ಬಣ್ಣ ಬಣ್ಣದ ಅಂಶಗಳು ಸಂಭ್ರಮವನ್ನು ಬಿಂಬಿಸಿವೆ.
‘3... 2... 1... ಹೊಸ ವರ್ಷದ ಶುಭಾಶಯಗಳು!’ ಎಂದು ಗೂಗಲ್ ಶುಭ ಕೋರಿದೆ.
ಈ ಡೂಡಲ್ ಹೊಸ ವರ್ಷವನ್ನು ಪ್ರಾರಂಭಿಸಲು ಹೊಸ ಹುರುಪನ್ನು ನೀಡುತ್ತದೆ! ಮಧ್ಯರಾತ್ರಿಯಿಂದ ಪ್ರಪಂಚದಾದ್ಯಂತದ ಜನರು ತಮ್ಮ ಹೊಸ ವರ್ಷದ ಸಂಕಲ್ಪ ಮತ್ತು ಯಶಸ್ಸು, ಪ್ರೀತಿ, ಸಂತೋಷ ಎಲ್ಲದಕ್ಕಾಗಿ ಶುಭ ಕೋರಲು ಪ್ರಾರಂಭಿಸಿದ್ದಾರೆ ಎಂದು ಬರೆಯಲಾಗಿದೆ.
ಭಾರತದಾದ್ಯಂತ ಮಹಾ ನಗರಗಳು ಹೊಸ ವರ್ಷವನ್ನು ಅದ್ದೂರಿಯಾಗಿ ಸಂಭ್ರಮದಿಂದ ಸ್ವಾಗತಿಸಿದವು. ಗೋವಾದಲ್ಲಿ ಪಟಾಕಿಗಳ ಭವ್ಯವಾದ ಪ್ರದರ್ಶನದೊಂದಿಗೆ ಬೆರಗುಗೊಳಿಸುವಂತಹ ಸಂಭ್ರಮ ನಡೆಯಿತು. ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಸೇರಿದ್ದ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದರು.
ಕಳೆದ ವರ್ಷವು ಭಾರತಕ್ಕೆ ರಾಷ್ಟ್ರೀಯ ಮತ್ತು ಜಾಗತಿಕ ರಂಗಗಳಲ್ಲಿ ಮಹತ್ವದ್ದಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ G-20 ಶೃಂಗಸಭೆ, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದ್ದು ಅತ್ಯಂತ ಮಹತ್ವದ ಘಟನೆಗಳಾಗಿವೆ. ಅಯೋಧ್ಯೆಯ ಬಹು ನಿರೀಕ್ಷಿತ ರಾಮ ಮಂದಿರದ ಉದ್ಘಾಟನೆಯಿಂದ ಮುಂಬರುವ ಲೋಕಸಭೆ ಚುನಾವಣೆಯವರೆಗೆ, ಹೊಸ ವರ್ಷದಲ್ಲೂ ಭಾರತವು ಪ್ರಮುಖ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.