ADVERTISEMENT

ಹರಿಯಾಣ: ಗೋಪಾಲ್‌ ಕಾಂಡಾ ಕಿಂಗ್‌ಮೇಕರ್, ದುಷ್ಯಂತ್ ಚೌಟಾಲ ಡಿಸಿಎಂ

ಜೆಜೆಪಿ ಬೆಂಬಲ ಕೋರಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 16:33 IST
Last Updated 25 ಅಕ್ಟೋಬರ್ 2019, 16:33 IST
ದುಷ್ಯಂತ್ ಚೌಟಾಲ
ದುಷ್ಯಂತ್ ಚೌಟಾಲ   

ನವದೆಹಲಿ: ಹರಿಯಾಣದ ಹೊಸ ಸರ್ಕಾರ ರಚನೆಯಲ್ಲಿ ‘ವಿವಾದಾತ್ಮಕ’ ನಾಯಕ ಗೋಪಾಲ್‌ ಕಾಂಡಾ ಅವರು ‘ಕಿಂಗ್‌ಮೇಕರ್‌’ ಆಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚನೆಗೆ ಆರು ಶಾಸಕರ ಬೆಂಬಲ ಬೇಕಾಗಿದೆ.

ಸರ್ಕಾರ ರಚನೆಗೆ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲ ಕೋರುವಂತೆಕಾಂಡಾ ಅವರು ಬಿಜೆಪಿಯ ಮೇಲೆ ಒತ್ತಡ ಹೇರಿದ್ದಾರೆ.ಜೆಜೆಪಿ ನಾಯಕ ದುಷ್ಯಂತ್ ಚೌಟಾಲಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಸರ್ಕಾರ ರಚನೆಗೆ ಸಂಬಂಧಿಸಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ಹರಿಯಾಣ ಘಟಕದ ಮುಖ್ಯಸ್ಥ ಸುಭಾಷ್ ಬರಾಲ ಮತ್ತು ದುಷ್ಯಂತ್ ಚೌಟಾಲ ಅವರು ಅಮಿತ್ ಶಾ ಅವರನ್ನು ಭೇಟಿ ಚರ್ಚೆ ನಡೆಸಿದ್ದಾರೆ.ಚೌಟಾಲ ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಭೇಟಿ ಬಳಿಕ ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ.

ADVERTISEMENT

ಕಾಂಡಾ ವಿರುದ್ಧ ಇದೆ ಅತ್ಯಾಚಾರ ಆರೋಪ:ಕಾಂಡಾ ವಿರುದ್ಧ ಅತ್ಯಾಚಾರ ಆರೋಪ ಇದೆ. 2012ರಲ್ಲಿ ಗಗನಸಖಿಯೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪವೂ ಅವರ ಮೇಲಿದೆ. ಬಿಜೆಪಿ ಸಂಸದೆ ಸುನಿತಾ ದುಗ್ಗಲ್‌ ಅವರು ಕಾಂಡಾ ಅವರನ್ನು ಗುರುವಾರ ರಾತ್ರಿ ದೆಹಲಿಗೆ ಕರೆದೊ‌‌ಯ್ದಿದ್ದಾರೆ. ಅವರ ಜತೆಗೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ವ್ಯಕ್ತಿಯೂ ಇದ್ದರು.

ಹೊಸದಾಗಿ ಆಯ್ಕೆಯಾಗಿರುವ ಐವರ ಬೆಂಬಲ ತಮಗೆ ಇದೆ ಎಂದು ಕಾಂಡಾ ಅವರು ಹೇಳಿಕೊಂಡಿದ್ದಾರೆ. ಸರ್ಕಾರ ರಚನೆಗೆ ಸಂಬಂಧಿಸಿ ಬಿಜೆಪಿ ನಾಯಕರ ಜತೆಗೆ ಕಾಂಡಾ ಅವರು ಮಾತುಕತೆ ನಡೆಸುತ್ತಿದ್ದಾರೆ. ಈ ಮಾತುಕತೆಯಲ್ಲಿ ಭಾಗಿಯಾಗುವುದಕ್ಕಾಗಿ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರು ಶುಕ್ರವಾರ ಬೆಳಿಗ್ಗೆ ದೆಹಲಿ ತಲುಪಿದ್ದಾರೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್‌ ಚೌಟಾಲ ಅವರ ಸಹೋದರ ರಂಜಿತ್‌ ಸಿಂಗ್‌ ಅವರೂ ಕಾಂಡಾ ಅವರ ಜತೆಗೆ ಇದ್ದಾರೆ. ಅವರು ರಾಣಿಯಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್‌ ಸಿಂಗ್‌ ಹೂಡಾ ಅವರಿಗೆ ಸಂಖ್ಯಾಬಲದ ಕೊರತೆಯಾದಾಗ ಇದೇ ಕಾಂಡಾ ಅವರ ನೆರವನ್ನು ಕೋರಿದ್ದರು. ಅವರನ್ನು ಸಚಿವರನ್ನಾಗಿಯೂ ಮಾಡಿದ್ದರು. 2012ರಲ್ಲಿ ಗಗನಸಖಿಯ ಆತ್ಮಹತ್ಯೆಯ ಬಳಿಕ ಕಾಂಡಾ ಬಂಧನಕ್ಕೆ ಒಳಗಾಗಿದ್ದರು. ಸಚಿವ ಸ್ಥಾನ ತೊರೆದಿದ್ದರು.

ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡುವ ಪಕ್ಷೇತರ ಶಾಸಕರು ತಮ್ಮ ಸಮಾಧಿ ತಾವೇ ತೋಡಿಕೊಂಡಂತೆ ಎಂದು ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.