ನವದೆಹಲಿ: ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕಾಗಿ ನಿರ್ಮಿಸಿರುವ ಹೊಗೆ ಮುಕ್ತ ಗೋಪುರದ ಕಾರ್ಯವಿಧಾನ ಕುರಿತು ಐಐಟಿ ಬಾಂಬೆ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವಂತೆ ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ ರಾಯ್ ಅಧಿಕಾರಿಗಳಿಗೆ ಗುರುವಾರ ಸೂಚಿಸಿದ್ದಾರೆ.
‘ಹೊಗೆ ಗೋಪುರ ಕುರಿತು ಸಿದ್ಧಪಡಿಸಲಾದ ವರದಿಯನ್ನು ಈವರೆಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿಲ್ಲ. ಘಟಕದ ಕಾರ್ಯಚಟುವಟಿಕೆ ತಡೆರಹಿತವಾಗಿ ಮುಂದುವರಿಯಲು ಅನುಕೂಲವಾಗುವಂತೆ, ತಜ್ಞರ ವರದಿಯನ್ನು ಶೀಘ್ರದಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಅವರು ನಿರ್ದೇಶಿಸಿದ್ದಾರೆ.
‘ಸುಪ್ರೀಂ ಕೋರ್ಟ್ 2021ರಲ್ಲಿ ನಿರ್ದೇಶಿಸಿದಂತೆ ಕನ್ನಾಟ್ ಪ್ರದೇಶದ ಬಾಬಾ ಖಾರಕ್ ಸಿಂಗ್ ಮಾರ್ಗದಲ್ಲಿ ಹೊಗೆ ಮುಕ್ತ ಗೋಪುರವನ್ನು ದೆಹಲಿ ಮಾಲಿನ್ಯ ನಿಯಂತ್ರ ಸಮಿತಿಯು ಅಳವಡಿಸಿದೆ. ಚಳಿಗಾಲವು ಹತ್ತಿರದಲ್ಲೇ ಇದೆ. ಅಷ್ಟರೊಳಗೆ ಈ ಘಟಕ ತನ್ನ ಕಾರ್ಯವನ್ನು ಮುಂದುವರಿಸಲು ಅನುಕೂಲವಾಗುವಂತೆ ತಜ್ಞರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು’ ಎಂದಿದ್ದಾರೆ.
‘ಚಳಿಗಾಲದಲ್ಲಿ ದೆಹಲಿಯಲ್ಲಿ ಹೆಚ್ಚಾಗುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿಯ ಭಾಗವಾಗಿ ಈ ಯೋಜನೆ ಕಾರ್ಯಗತಗೊಳಿಸಲಾಗಿದೆ. ಎರಡು ವರ್ಷಗಳ ಪ್ರಾಯೋಗಿಕ ಅಧ್ಯಯನದ ಭಾಗ ಇದಾಗಿದೆ. ಗೋಪುರದ ನಿರ್ಮಾಣವನ್ನು ಟಾಟಾ ಪ್ರಾಜೆಕ್ಟ್ಸ್ ನಡೆಸಿದೆ. ಘಟಕದ ಕಾರ್ಯಕ್ಷಮತೆಯನ್ನು ಐಐಟಿ–ಬಾಂಬೆ ಮತ್ತು ಐಐಟಿ–ದೆಹಲಿ ನಡೆಸಬೇಕಿತ್ತು. ಈ ಯೋಜನೆಯ ಒಟ್ಟು ವೆಚ್ಚ ₹20.42 ಕೋಟಿಯಾಗಿದೆ’ ಎಂದು ರಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.