ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ₹350 ಕೋಟಿ ಸೇರಿದಂತೆ ಶ್ರೀಲಂಕಾಗೆ ₹3000 ಕೋಟಿ ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದ್ದಾರೆ.
ಭಾರತಕ್ಕೆ ಬಂದಿರುವಶ್ರೀಲಂಕಾದ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರೊಂದಿಗೆ ಮೋದಿ ಅವರು ಫಲಪ್ರದ ಮಾತುಕತೆ ನಡೆಸಿದರು. ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದವರ ಆಶೋತ್ತರ ಈಡೇರಿಸುವುದು, ಭದ್ರತೆ ಹೆಚ್ಚಳ ಕಾರ್ಯತಂತ್ರ, ದ್ವಿಪಕ್ಷೀಯ ವ್ಯಾಪಾರ ಹಾಗೂ ಮೀನುಗಾರರ ಸಮಸ್ಯೆ ನಿವಾರಣೆ ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಗಿದೆ.
ನೆರೆಯ ದೇಶವು ವೇಗದ ಅಭಿವೃದ್ಧಿ ಸಾಧಿಸಲು ಭಾರತದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ರಾಜಪಕ್ಸೆ ಅವರಿಗೆ ಪ್ರಧಾನಿ ಭರವಸೆ ನೀಡಿದರು. ಶ್ರೀಲಂಕಾದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ₹3 ಸಾವಿರ ಕೋಟಿ ನೀಡಲಾಗುತ್ತಿದೆ. ಇದರಜೊತೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನೆರವು ನೀಡಲಾಗುತ್ತಿದೆ. ಇದೇ ಏಪ್ರಿಲ್‌ನಲ್ಲಿ ಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
‘ಭಯೋತ್ಪಾದನೆ ವಿರುದ್ಧದ ಹೋರಾಟದ ವಿಧಾನವನ್ನು ಅರಿಯುವ ಸಲುವಾಗಿ ಶ್ರೀಲಂಕಾದ ಪೊಲೀಸ್ ಅಧಿಕಾರಿಗಳಿಗೆ ಭಾರತದ ಮಹತ್ವದ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ’ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.