ನವದೆಹಲಿ: ‘ಸನಾತನ ಧರ್ಮದ ಸೋಗಿನಲ್ಲಿ ಹಿಂದುಳಿದ ವರ್ಗ, ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಿ, ಮನುಸ್ಮೃತಿಯನ್ನು ಜಾರಿಗೊಳಿಸಲು ಬಿಜೆಪಿ ಗುಪ್ತ ಕಾರ್ಯಸೂಚಿ ಹೊಂದಿದೆ. ಬಿಜೆಪಿಗೆ ಬಾಬಾ ಸಾಹೇಬರು ರಚಿಸಿದ ಸಂವಿಧಾನ ಬೇಕಿಲ್ಲ’ ಎಂದು ಜನತಾದಳ ಸಂಯುಕ್ತ (ಜೆಡಿಯು) ಶುಕ್ರವಾರ ನಡೆಸಿದ ಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಿ ಹೇಳಿದೆ.
ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು.
‘ದೇಶವು ಸ್ವಾತಂತ್ರ್ಯ ನಂತರದಲ್ಲಿ ಇದೀಗ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಸರ್ವಾಧಿಕಾರದತ್ತ ದೇಶವನ್ನು ಕೊಂಡೊಯ್ಯುತ್ತಿದೆ’ ಎಂದು ಹೇಳಲಾಗಿದೆ.
'ಭಯ, ದ್ವೇಷ ಮತ್ತು ಹಿಂಸಾತ್ಮಕ ಪ್ರವೃತ್ತಿಯನ್ನು ಸಮಾಜದಲ್ಲಿ ಬಿಜೆಪಿ ಬೆಳೆಸುತ್ತಿದೆ. ರಾಜಕೀಯ ಎನ್ನುವುದನ್ನು ವಂಚನೆ ಹಾಗೂ ಸೇಡಿನ ವೃತ್ತಿಯನ್ನಾಗಿ ಪರಿವರ್ತಿಸಿದೆ. ಇದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಲಿದೆ. ಸಾಂವಿಧಾನಿಕ ಸಂಸ್ಥೆಗಳು ಮತ್ತು ಒಕ್ಕೂಟ ವ್ಯವಸ್ಥೆಯನ್ನೇ ಬಿಜೆಪಿ ದುರ್ಬಲಗೊಳಿಸುತ್ತಿದೆ’ ಎಂದು ಪಕ್ಷ ತೆಗೆದುಕೊಂಡ ನಿರ್ಣಯದಲ್ಲಿ ಹೇಳಲಾಗಿದೆ.
‘ಕಳೆದ ಒಂಭತ್ತು ವರ್ಷಗಳಲ್ಲಿ ದೇಶದ ಪರಿಸ್ಥಿತಿ ಹದಗೆಟ್ಟಿದ್ದು, ಭಯಾನಕ ರೂಪ ಪಡೆದುಕೊಂಡಿದೆ. ದೇಶದ ಜನರ ಸಮಸ್ಯೆಗಳತ್ತ ಕೇಂದ್ರ ಸರ್ಕಾರ ಗಮನವನ್ನೇ ನೀಡುತ್ತಿಲ್ಲ. ಸುಳ್ಳು ಘೋಷಣೆಗಳನ್ನೇ ಹೇಳುತ್ತ ಸಾಮಾನ್ಯ ಜನರ ಗಮನವನ್ನು ಬೇರೆಡೆ ಸೆಳೆದು ಸಮಸ್ಯೆಗಳನ್ನು ಜೀವಂತವಾಗಿರಿಸಿದೆ’ ಎಂದು ಆರೋಪಿಸಿದೆ.
‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ರಕ್ಷಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದರೆ, ಬಿಜೆಪಿ ಸನಾತನ ವಿಷಯವನ್ನು ಮುನ್ನೆಲೆಗೆ ತರುತ್ತಿದೆ. ಸನಾತನ ಸಂಸ್ಕೃತಿಯ ಮೌಲ್ಯ ಹಾಗೂ ಸಂಪ್ರದಾಯಗಳ ಬಗ್ಗೆ ನಮಗೆ ಗೌರವವಿದೆ. ಇದರಲ್ಲಿ ಯಾವುದೇ ವಿರೋಧವಿಲ್ಲ. ಆದರೆ ಹಿಂದುಳಿದ, ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಕಡೆಗಣಿಸಿ, ಈಗ ಇದ್ದಕ್ಕಿದ್ದಂತೆ ಸನಾತನ ಧರ್ಮದ ಮಾತುಗಳನ್ನಾಡುತ್ತಿದೆ’ ಎಂದು ಜೆಡಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.