ADVERTISEMENT

PM ಗರೀಬ್‌ ಕಲ್ಯಾಣ ಅನ್ನ ಯೋಜನೆ | 2028ರವರೆಗೆ ಉಚಿತ ಅಕ್ಕಿ ವಿತರಣೆ: ಕೇಂದ್ರ

ಪಿಟಿಐ
Published 9 ಅಕ್ಟೋಬರ್ 2024, 11:32 IST
Last Updated 9 ಅಕ್ಟೋಬರ್ 2024, 11:32 IST
   

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರೆ ಕಲ್ಯಾಣ ಯೋಜನೆಗಳಡಿ ಉಚಿತವಾಗಿ ಸಾರವರ್ಧಿತ ಅಕ್ಕಿ ವಿತರಣೆಯನ್ನು 2028ರ ಡಿಸೆಂಬರ್‌ವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಅನುಮೋದನೆ ನೀಡಿದೆ. 

ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌, ‘ರಕ್ತಹೀನತೆ ಹಾಗೂ ಸೂಕ್ಷ್ಮ ಪೋಷಕಾಂಶಗಳ ಕೊರತೆ ನೀಗಿಸುವ ಉದ್ದೇಶದಿಂದ ಈ ಯೋಜನೆ ಮುಂದುವರಿಸಲು ನಿರ್ಧರಿಸಲಾಗಿದೆ. ಇದಕ್ಕೆ ₹17,082 ಕೋಟಿ ವೆಚ್ಚವಾಗಲಿದೆ. ಸಂಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದರು. 

‘2019 ಮತ್ತು 2021ರ ನಡುವೆ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌ 5) ಪ್ರಕಾರ, ದೇಶದಲ್ಲಿ ರಕ್ತಹೀನತೆಯು ಪ್ರಮುಖ ಸಮಸ್ಯೆಯಾಗಿದೆ. ಇದು ವಿವಿಧ ವಯಸ್ಸಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ದೇಶದಲ್ಲಿ ಶೇ 65ರಷ್ಟು ಜನರು ಅಕ್ಕಿಯನ್ನು ಪ್ರಧಾನ ಆಹಾರವಾಗಿ ಸೇವಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮಾನದಂಡದ ಅನ್ವಯ ಅಕ್ಕಿ ಹಿಟ್ಟಿಗೆ ಕಬ್ಬಿಣಾಂಶ, ಪೋಲಿಕ್‌ ಆಮ್ಲ, ವಿಟಮಿನ್‌ ಬಿ-12 ಅಂಶ ಸೇರಿಸಿ ಸಾರವರ್ಧಿತ ಅಕ್ಕಿ ತಯಾರಿಸಲಾಗುತ್ತದೆ. 

75ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಪೌಷ್ಟಿಕಾಂಶದ ಭದ್ರತೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಸಾರ್ವಜನಿಕ ವಿತರಣಾ ವ್ಯವಸ್ಥೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಪಿಎಂ ಪೋಷಣ್‌ ಅಭಿಯಾನ ಸೇರಿ ಇತರೆ ಕಲ್ಯಾಣ ಯೋಜನೆಗಳಡಿ ಸಾರವರ್ಧಿತ ಅಕ್ಕಿ ವಿತರಣೆಗೆ ಸರ್ಕಾರ ಕ್ರಮಕೈಗೊಳ್ಳುವುದಾಗಿ ಪ್ರಕಟಿಸಿತ್ತು. 

2022ರ ಏಪ್ರಿಲ್‌ನಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಹಂತ ಹಂತವಾಗಿ ಸಾರವರ್ಧಿತ ಅಕ್ಕಿ ವಿತರಣೆಗೆ ನಿರ್ಧರಿಸಿತ್ತು. ಪ್ರಸಕ್ತ ವರ್ಷದ ಮಾರ್ಚ್‌ ಅಂತ್ಯದವರೆಗೆ ಮೂರು ಹಂತದಲ್ಲಿ ಈ ಅಕ್ಕಿ ವಿತರಣೆಯ ನಿಗದಿತ ಗುರಿಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.

ಎನ್‌ಎಂಎಚ್‌ಸಿ ಅಭಿವೃದ್ಧಿ:

ಗುಜರಾತ್‌ನ ಲೋಥಾಲ್‌ನಲ್ಲಿರುವ ‘ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣ’ದ (ಎನ್‌ಎಂಎಚ್‌ಸಿ) ಅಭಿವೃದ್ಧಿಗೆ ಸಂಪುಟ ಒಪ್ಪಿಗೆ ನೀಡಿದೆ.

ಈ ಯೋಜನೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ರಾಜಸ್ಥಾನ ಹಾಗೂ ಪಂಜಾಬ್‌ನ ಗಡಿ ಪ್ರದೇಶಗಳಲ್ಲಿ ₹4,406 ಕೋಟಿ ವೆಚ್ಚದಲ್ಲಿ 2,280 ಕಿ.ಮೀ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.