ADVERTISEMENT

ತಮಿಳುನಾಡು | ವೈದ್ಯನಿಗೆ ಚಾಕು ಇರಿತ: ಘಟನೆ ಖಂಡಿಸಿ ಮುಷ್ಕರ ಆರಂಭಿಸಿದ ವೈದ್ಯರು

ಇ.ಟಿ.ಬಿ ಶಿವಪ್ರಿಯನ್‌
Published 13 ನವೆಂಬರ್ 2024, 10:12 IST
Last Updated 13 ನವೆಂಬರ್ 2024, 10:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಇಲ್ಲಿನ ಕಲೈನರ್‌ ಸೆಂಟಿನರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಕೆಸಿಎಂಎಸ್‌ಎಚ್) ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಮಿಳುನಾಡು ಸರ್ಕಾರಿ ವೈದ್ಯರ ಸಂಘ (ಟಿಎನ್‌ಜಿಡಿಎ) ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.

ತುರ್ತು ಸೇವೆಗಳನ್ನು ಹೊರತುಪಡಿಸಿ ವೈದ್ಯರು ಬುಧವಾರ ಮಧ್ಯಾಹ್ನದಿಂದಲೇ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಟಿಎನ್‌ಜಿಡಿಎ ಅಧ್ಯಕ್ಷ ಡಾ. ಕೆ. ಸೆಂಥಿಲ್ ಹೇಳಿದ್ದಾರೆ.

ADVERTISEMENT

ಆಸ್ಪತ್ರೆಯಲ್ಲಿ ವೈದ್ಯ ಜೆ. ಬಾಲಾಜಿ ಅವರು ಇಂದು ಬೆಳಿಗ್ಗೆ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ಚಾಕುವಿನಿಂದ ಏಕಾಏಕಿ ದಾಳಿ ನಡೆಸಿದ ಆರೋಪಿಗಳು, ಬಾಲಾಜಿಯವರ ಕುತ್ತಿಗೆ ಸೇರಿ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಇರಿದಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಬಾಲಾಜಿ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಸಿಎಂಎಸ್‌ಎಚ್‌ನ ವೈದ್ಯರು ಹಲ್ಲೆಯನ್ನು ಖಂಡಿಸಿದ್ದು, ಅಶಿಸ್ತಿನ ರೋಗಿಗಳು ಮತ್ತು ಅವರ ಸಂಬಂಧಿಕರಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಹಲ್ಲೆಗೊಳಗಾಗಿರುವ ವೈದ್ಯರನ್ನು ಭೇಟಿ ಮಾಡಲು ಬಂದಿದ್ದ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರಿಗೆ ವೈದ್ಯರು ಘೇರಾವ್ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಸರ್ಕಾರಿ ವೈದ್ಯರು ತಕ್ಷಣವೇ ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಬೇಕು. ಜತೆಗೆ, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಒಗ್ಗಟ್ಟಿನ ಸಂಕೇತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಟಿಎನ್‌ಜಿಡಿಎ ಮನವಿ ಮಾಡಿದೆ ಎಂದು ಸೆಂಥಿಲ್ ಹೇಳಿದ್ದಾರೆ.

‘ಕೆಲಸ ಮಾಡುವ ಸ್ಥಳದಲ್ಲಿ ನಮಗೆ ಸೂಕ್ತ ಭದ್ರತೆ ಇಲ್ಲದಿರುವಾಗ ನಾವೇಕೆ ಕೆಲಸ ಮಾಡಬೇಕು? ನಾವು ಕಳೆದ ಹಲವು ವರ್ಷಗಳಿಂದ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಸೆಂಥಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಾದ್ಯಂತ ಪ್ರತಿದಿನ 5 ಲಕ್ಷಕ್ಕೂ ಹೆಚ್ಚು ಜನರು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರವು ವೈದ್ಯರ ಭದ್ರತೆಯನ್ನು ನಿರ್ಲಕ್ಷಿಸಿದೆ ಎಂದು ಸೆಂಥಿಲ್ ಕಿಡಿಕಾರಿದ್ದಾರೆ.

ವೈದ್ಯರು ಮುಷ್ಕರ ಹಮ್ಮಿಕೊಂಡಿರುವುದರಿಂದ ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಅವರು ಸಂಜೆ ವೇಳೆಗೆ ವೈದ್ಯರು ಮತ್ತು ಟಿಎನ್‌ಜಿಡಿಎ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.